ತಿರುವನಂತಪುರಂ: ವೈದ್ಯರೊಬ್ಬರು ವರದಕ್ಷಿಣೆಗೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಕೇರಳದಲ್ಲಿ ನಡೆದಿದೆ. ಮೃತಳನ್ನು ಶಹನಾ (26) ಎನ್ನಲಾಗಿದ್ದು, ಸದ್ಯ ಈ ಆತ್ಮಹತ್ಯೆಗೆ ಬೇಸರ ವ್ಯಕ್ತಪಡಿಸಿರುವ ಸಚಿವೆ ವೀಣಾ ಜಾರ್ಜ್ ಅವರು, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ (Shahana) ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ನೇಹಿತ ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ ನಂತರ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಗೆಳೆಯನ ಕುಟುಂಬವು ಚಿನ್ನ, ಜಮೀನು ಹಾಗೂ ಬಿಎಂಡಬ್ಲ್ಯು ಕಾರನ್ನು ನೀಡುವಂತೆ ಬೇಡಿಕೆ ಇಟ್ಟಿದೆ. ಆದರೆ, ಇಷ್ಟೆಲ್ಲ ಶಹಾನಾ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿ ಆಗಿದ್ದ ವೈದ್ಯ ಮದುವೆ ಪ್ರಸ್ತಾಪದಿಂದ ಹಿಂದೆ ಸರಿದಿದ್ದಾನೆ. ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವೊಕೇಟ್ ಸತಿದೇವಿ ಶಹಾನಾ ಮನೆಗೆ ತೆರಳಿ ತಾಯಿಯನ್ನು ಭೇಟಿ ಮಾಡಿದ್ದಾರೆ. ಆಗ ಪ್ರಕರಣದ ತನಿಖೆ ನಡೆಸಬೇಕೆಂದು ತಾಯಿ ಒತ್ತಾಯಿಸಿದ್ದಾರೆ.