ಲಕ್ನೋ: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ವೈದ್ಯನೊಬ್ಬ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ. ಅರುಣ್ ಕುಮಾರ್ ಸಿಂಗ್ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದು, ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಕ್ಕಳನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಆನಂತರ ಕೊಲೆ ಮಾಡಿರಬಹುದು ಎನ್ನಲಾಗಿದೆ. ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದು ಸದ್ಯಕ್ಕೆ ತಿಳಿದು ಬಂದ ವಿಷಯವಾಗಿದೆ. ವೈದ್ಯ ಖಿನ್ನತೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.