ಶರಾವತಿ ಹಿನ್ನೀರಿನ ಜನರ ಪಿಡುಗಿನ ಕಥೆಗೆ ಕೊನೆಗೂ ಮುಕ್ತಿ ಸಿಕ್ಕಿದೆ! ದೇಶದ 2ನೇ ಅತೀ ಉದ್ದದ ಕೇಬಲ್ ಸೇತುವೆ – ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಅಧಿಕೃತವಾಗಿ ಲೋಕಾರ್ಪಣೆಯಾಗಿದೆ. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶರಾವತಿ ನದಿಗೆ ಬಾಗಿನ ಅರ್ಪಿಸುವ ಮೂಲಕ ಈ ಮಹತ್ವದ ಯೋಜನೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗಣಪತಿ ಹೋಮ, ಸಿಗಂದೂರು ಚೌಡೇಶ್ವರಿ ದೇವಿಯ ವಿಶೇಷ ಪೂಜೆ ಮತ್ತು ಆರತಿ ಕಾರ್ಯಕ್ರಮವೂ ನಡೆಯಿತು. ಸ್ಥಳೀಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣವಾಗಿರುವುದು ಈ ಪ್ರದೇಶದ ಜನರ ಕನಸು ಈಡೇರಿದೆ. ಕಳೆದ 60 ವರ್ಷಗಳಿಂದ ಈ ಭಾಗದ ಜನತೆ ಸಂಪರ್ಕ ಸೌಲಭ್ಯಕ್ಕಾಗಿ ತೊಂದರೆ ಅನುಭವಿಸುತ್ತಿದ್ದರು. ಸಾಗರದಿಂದ ತಮರಿ ಅಥವಾ ಸಿಗಂದೂರಿಗೆ ಹೋಗಬೇಕಾದರೆ 100 ಕಿಲೋಮೀಟರ್ ಸುತ್ತಿ ಹೋಗಬೇಕಿತ್ತು. ಇಲ್ಲದೇ ಇದ್ದರೆ ಲಾಂಚ್ ಮೂಲಕ ಸಂಚರಿಸಬೇಕಾಗುತ್ತಿತ್ತು.
ಈಗ ಹೊಸ ಸೇತುವೆಯಿಂದ ಸುತ್ತುವ ಅಂತರ ಅರ್ಧದಷ್ಟು ತಗ್ಗಿದೆ. ಜನರಿಗೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ವಿಕಾಸದ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
430 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ
430 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆಯು ತಾಂತ್ರಿಕವಾಗಿಯೂ ಅತ್ಯಾಧುನಿಕವಾಗಿದ್ದು, ಭಾರತದ 2ನೇ ಅತೀ ಉದ್ದದ ಕೇಬಲ್ ಸೇತುವೆಯಾಗಿ ಗುರುತಿಸಿಕೊಂಡಿದೆ. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಈ ಸೇತುವೆಯಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.
ಗಡ್ಕರಿ ಅವರ ಭರವಸೆ
ಸೇತುವೆ ಲೋಕಾರ್ಪಣೆ ನಂತರ ಮಾತನಾಡಿದ ನಿತಿನ್ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಸೇತುವೆಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾಗಕ್ಕೂ ಸುಗಮ ಸಂಪರ್ಕ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಶರಾವತಿ ಹಿನ್ನೀರಿನ ಜನರ 6 ದಶಕಗಳ ಕನಸು ಇಂದು ನನಸಾಗಿದೆ ಎಂದು ಹೇಳಿದರು.
ಈ ಸಂದರ್ಭ, ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಚಿವರು, ಪ್ರಾದೇಶಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಇನ್ನಷ್ಟು ಯೋಜನೆಗಳು ಬರಲಿವೆ ಎಂದು ಭರವಸೆ ನೀಡಿದರು.








