ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳಿರುವಾಗ ಎದ್ದು ನಿಂತ ಕೋವಿಡ್ ಸೋಂಕಿತೆ
ನವದೆಹಲಿ : ಮೃತಪಟ್ಟಿದ್ದಾರೆಂದು ತಿಳಿದು ಕೋವಿಡ್ ಸೋಂಕಿತೆಯ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿರುವ ಕುಟುಂಬಸ್ಥರು ಕೊನೆ ಘಳಿಗೆಯಲ್ಲಿ ಶಾಕ್ ಗೆ ಒಳಗಾಗಿದ್ಧಾರೆ.
ಬಾರಾಮತಿಯ ಮುಧಲೆ ಗ್ರಾಮದ, 76 ವರ್ಷದ ಮಹಿಳೆ ಕೋವಿಡ್ ನಿಂದ ಮೃತಪಟ್ಟಿದ್ದಾಳೆಂದು ನಂಬಿ ಕುಟುಂಬದವರು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದಾಗ ಮಹಿಳೆ ಎದ್ದುನಿಂತಿದ್ದು, ಕುಟುಂಬಸ್ಥರು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ.
ಮಹಿಳೆಯನ್ನು ಶಕುಂತಲಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಈಕೆಗೆ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಆಕೆಯನ್ನು ಕುಟುಂಬಸ್ಥರು ಬಾರಾಮತಿಯಲ್ಲಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಬೆಡ್ ಸಿಗದೇ ಹೋದಾಗ ಕಾರಿನಲ್ಲಿ ಆಕೆಯನ್ನು ಇರಿಸಲಾಗಿತ್ತು. ಈ ಮಧ್ಯೆ ಆಕೆ ಪ್ರಜ್ಞೆಯನ್ನು ಕಳೆದುಕೊಂಡಿದ್ದಳು. ಹೀಗಾಗಿ ಮೃತಪಟ್ಟಿದ್ಧಾರೆಂದು ಭಾವಿಸಿ ಕುಟುಂಬಸ್ಥರು ಅಂತಿಮ ಕ್ರಿಯೆಗೆ ಸಿದ್ಧತೆ ಮಾಡಿಕೊಂಡರು.
ಇನ್ನೇನು ಅಂತ್ಯಕ್ರಿಯೆ ನಡೆಸಬೇಕೆನ್ನುವಷ್ಟರಲ್ಲಿ ಕೋವಿಡ್ ಸೋಂಕಿತ ವೃದ್ಧೆ ಅಳುತ್ತಾ, ಎದ್ದು ಕುಳಿತಿದ್ದಾರೆ. ಇದರಿಂದ ಶಾಕ್ ಗೆ ಒಳಗಾದ ಮಹಿಳೆ ಕುಟುಂಬಸ್ಥರು ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದಿದ್ಧಾರೆ. ಇದೀಗ ಆಕೆಯನ್ನು ಬಾರಾಮತಿಯ ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.