ನವದೆಹಲಿ: ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಗ್ರಾಹಕರು ಸಂತಸ ಪಡುವಂತಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ (Cylinder Price) ದರವನ್ನು 30 ರೂ. ಇಳಿಕೆ ಮಾಡಿವೆ.
ಆದರೆ, ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ (LPG) ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಗೃಹಿಣಿಯರು ಈ ಸುದ್ದಿಯ ಬಗ್ಗೆ ಸಂತಸ ಪಡುವಂತಿಲ್ಲ. ಬೆಂಗಳೂರಿನಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 905.50 ರೂ.ದರವಿದೆ. ದೆಹಲಿಯಲ್ಲಿ 803 ರೂ. ಕೋಲ್ಕತ್ತಾದಲ್ಲಿ 829 ರೂ. ಚೆನ್ನೈನಲ್ಲಿ 818.50 ರೂ. ಮತ್ತು ಮುಂಬೈನಲ್ಲಿ 802.50 ರೂ. ಇದೆ.
ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದ್ದು, ಹೋಟೆಲ್ ನಂತಹ ವ್ಯಾಪಾರಸ್ಥರು ಖುಷಿ ಪಡುವಂತಾಗಿದೆ. ದರ ಇಳಿಕೆಯಿಂದ ದೆಹಲಿಯಲ್ಲಿ ಮೊದಲು 1,676 ರೂ.ಗೆ ಮಾರಾಟವಾಗುತ್ತಿದ್ದ 19 ಕೆಜಿ ಸಿಲಿಂಡರ್ ಈಗ 1,646 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,598 ರೂ., ಕೋಲ್ಕತ್ತಾದಲ್ಲಿ 1,756 ರೂ. ಇದೆ.