ಅಮ್ಮನ ಕಣ್ಣೆದುರೇ ಬಾಲಕಿ ಕುತ್ತಿಗೆ ಮೇಲೆ ಚಲಿಸಿದ ಆಟೋ
ಅಮ್ಮನ ಎದುರೆ ಮಗಳ ಕುತ್ತಿಗೆ ಮೇಲೆ ಅಟೋ ಚಕ್ರ ಹರಿದು ಬಾಲಕಿ ಸಾವನಪ್ಪಿದ್ದಾಳೆ. ಗ್ಯಾಸ್ ಸಿಲಿಂಡರ್ ಸಾಗಿಸುವ ಆಟೋಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿಯೊಬ್ಬಳು ಅನ್ಯಾಯವಾಗಿ ಬಲಿಯಾಗಿದ್ದಾಳೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ನಾಗಮಂಗಲ ಮೂಲದ ನಾಲ್ಕೂವರೆ ವರ್ಷದ ಭುವನಾ ಸಾವಿಗೀಡಾದ ಬಾಲಕಿ.ಘಟನೆ ಬಳಿಕ ಆಟೋ ಚಾಲಕ ಧನಂಜಯ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ಎಳನೀರು ಕುಡಿಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
ನಾಗಮಂಗಲ ಮೂಲದ ದಂಪತಿ ಬೆಂಗಳೂರಿನ ಕಾವೇರಿಪುರದಲ್ಲಿ ನೆಲೆಸಿದ್ದು, ಇಂದು ಬಾಲಕಿಯನ್ನು ತಾಯಿ ಎಳನೀರು ಕುಡಿಯಲು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲೇ ನಿಲ್ಲಿಸಿದ್ದ ಗ್ಯಾಸ್ ಸಾಗಿಸುವ ಆಟೋದ ಚಾಲಕ ಆಟೋ ಹ್ಯಾಂಡ್ ಬ್ರೇಕ್ ಹಾಕದೆ ಆಟೋದಿಂದ ಇಳಿದಿದ್ದರಿಂದ ಆಟೋ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ತಾಯಿ ಮಗಳಿಗೆ ಡಿಕ್ಕಿ ಹೊಡದಿದೆ. ಈ ಸಂದರ್ಭದಲ್ಲಿ ಬಾಲಕಿಯ ಕುತ್ತಿಗೆ ಮೇಲೆ ಆಟೋ ಸಾಗಿ ಬಾಲಕಿ ಸಾವನ್ನಪ್ಪಿದ್ದಾಳೆ.








