ಚಿಕ್ಕಬಳ್ಳಾಪುರ: ಅಧಿಕಾರ ಸ್ವೀಕರಿಸಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ( Airport) ಬಳಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ವಿಮಾನ ನಿಲ್ದಾಣದ ಬಿವಿಐಪಿ ಲಾಂಚ್ ನಿಂದ ಕುಮಾರಸ್ವಾಮಿ ಬರುತ್ತಿದ್ದಂತೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ಮುಗಿಬಿದ್ದರು.
ಹೂ ಮಾಲೆ ಹಾಕಿ, ಪುಷ್ಪ ಗುಚ್ಛ ನೀಡಿ ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಕೂಡ ಉಂಟಾಗಿತ್ತು. ಸಿಐಎಸ್ಎಫ್ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಜೆಡಿಎಸ್ ಕಾರ್ಯಕರ್ತರನ್ನ ಚದುರಿಸಿದರು. ನಂತರ ಬೆಂಗಳೂರಿನತ್ತ ಕುಮಾರಸ್ವಾಮಿ ಹೊರಟರು.
ನಂತರ ವಿಮಾನ ನಿಲ್ದಾಣದ ಸಾದಹಳ್ಳಿ ಟೋಲ್ ಬಳಿ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಜೆಸಿಬಿ ಹಾಗೂ ಕ್ರೇನ್‌ಗಳ ಮೂಲಕ ಬೃಹತ್ ಸೇಬಿನ ಹಾರ ಹೂಮಾಲೆ ಹಾಕಿ ಸ್ವಾಗತಿಸಿದರು.