ಐಪಿಎಲ್ ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಸಿಡಿಸಿದರೂ ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ.
ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸಿದ್ದಾರೆ. ಆದರೂ ತಂಡವನ್ನು ಗೆಲ್ಲಿಸುವಲ್ಲಿ ಅವರು ವಿಫಲರಾಗಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತ್ತು.
207 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಬಿಟ್ಟರೆ, ಬೇರೆ ಯಾವ ಆಟಗಾರರೂ ಪ್ರತಿರೋಧ ಒಡ್ಡಲಿಲ್ಲ. ಆದರೆ, ಆರಂಭದಲ್ಲಿ ಬಿರುಸಿನ ಆಟಕ್ಕೆ ಒತ್ತು ನೀಡಿದ್ದ ಹಿಟ್ಮ್ಯಾನ್ ನಂತರ ನಿಧಾನವಾದರು. ಈ ವೇಳೆ ಶತಕ ಪೂರೈಸಲು ಅವರು 61 ಎಸೆತ ಎದುರಿಸಿದರು.
ಈ ಮೂಲಕ ಐಪಿಎಲ್ ನಲ್ಲಿ ನಿಧಾನಗತಿಯಲ್ಲಿ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಮುಂಬೈ ಇಂಡಿಯನ್ಸ್ ಪರ ಶತಕ ಪೂರೈಸಲು ಅತೀ ಹೆಚ್ಚು ಎಸೆತಗಳನ್ನು ಎದುರಿಸಿದ 2ನೇ ಬ್ಯಾಟರ್ ಆದರು. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 2011 ರಲ್ಲಿ ಕೊಚ್ಚಿನ್ ಟಸ್ಕರ್ಸ್ ಕೇರಳ ವಿರುದ್ಧ 66 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಮುಂಬೈ ಪರ ಅತ್ಯಂತ ನಿಧಾನಗತಿಯ ಶತಕವಾಗಿದೆ. ಈಗ 61 ಎಸೆತ ಎದುರಿಸಿರುವ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಶತಕ ಪೂರೈಸಿದ ಕಳಪೆ ದಾಖಲೆ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಹೆಸರಿನಲ್ಲಿದೆ. ಇಬ್ಬರೂ ಆಟಗಾರರು 67 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.