ಭೋಪಾಲ್ : ಕೊರೊನಾ ವೈರಸ್ ಹಾವಳಿಗೆ ಹೆದರಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ದೇಶದಾದ್ಯಂತ ಕೊರೊನಾಸುರ ಅಬ್ಬರಿಸುತ್ತಾ ಸಾಗಿದ್ದಾನೆ. ಇದರ ಮಧ್ಯೆ ಕಾಮುಕರ ಅಟ್ಟಹಾಸ ಮಾತ್ರ ಕಡಿಮೆ ಆಗಿಲ್ಲ. ಮಧ್ಯಪ್ರದೇಶದಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಆಕೆಯ ಕಣ್ಣುಗಳಿಗೆ ಚಾಕುವಿನಿಂದ ಇರಿದ ನೀಚ ಕೃತ್ಯವೊಂದು ಬೆಳಕಿಗೆ ಬಂದಿದೆ.
ಬುಧವಾರ ಈ ಘಟನೆ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 7 ವರ್ಷದ ಬಾಲಕಿಯನ್ನು ಅಪಹರಿಸಿ, ಪಾಳುಬಿದ್ದ ಮನೆಗೆ ಎಳೆದೊಯ್ದು, ಕೈಗಳನ್ನು ಹಗ್ಗದಿಂದ ಕಟ್ಟಿ ಅತ್ಯಾಚಾರ ಎಸೆಗಲಾಗಿದೆ. ಬಳಿಕ ಬಾಲಕಿಯ ಕಣ್ಣುಗಳನ್ನು ಚಾಕುವಿನಿಂದ ಇರಿದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಅರಣ್ಯದ ಮಧ್ಯೆ ಕಾಮುಕ ಎಸೆದು ಹೋಗಿದ್ದಾನೆ.
ಇನ್ನು ಪೋಷಕರು ಬಾಲಕಿಯನ್ನು ಹುಡುಕಾಡುತ್ತಿದ್ದಾಗ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಜಬಲ್ ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಶಂಕಿತನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೆ ದಮೋಹ್ ಎಸ್ ಪಿ ಈ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಸಹಕರಿಸಿದರೆ 10 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.








