ಹಾವೇರಿ: ಹೆದ್ದಾರಿಯಲ್ಲಿನ ಸಸಿಗಳಿಗೆ ನೀರು ಹಾಕುತ್ತಿದ್ದ ಟ್ರ್ಯಾಕ್ಟರ್ ಗೆ (Tractor) ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ರೂಡ್ ಆಯಿಲ್ (Crude Oil) ರಸ್ತೆಯಲ್ಲಿ ಚೆಲ್ಲಾಡಿದೆ. ಆದರೆ, ಜನ ಅದನ್ನು ತುಂಬಿಕೊಳ್ಳಲು ಮುಗಿ ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಲಾರಿಯಲ್ಲಿದ್ದ ಬ್ಯಾರೆಲ್ ನಲ್ಲಿ ಕ್ರೂಡ್ ಆಯಿಲ್ ಇತ್ತು. ಲಾರಿ ಡಿಕ್ಕಿ ಹೊಡೆಯುತ್ತಿದ್ದಂತೆ ಅದು ನೆಲಕ್ಕೆ ಬಿದ್ದಿದೆ. ನೆಲಕ್ಕೆ ಬಿದ್ದು ನೀರಿನಂತೆ ಹರಿದು ಹೋಗಿದೆ.
ಘಟನೆಯಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಲಾರಿ ಚಾಲಕನನ್ನು ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಗಿಡಗಳಿಗೆ ನೀರು ಹಾಯಿಸುವ ಟ್ರ‍್ಯಾಕ್ಟರ್‌ಗೆ ಲಾರಿ ಗುದ್ದಿದೆ. ಆದರೆ, ಜನ ಮಾತ್ರ ಮಾನವೀಯತೆ ಮರೆತು ವರ್ತಿಸಿದ್ದಾರೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








