ಚಿಕ್ಕೋಡಿ: ದೇವರ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಮಜಲಟ್ಟಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ರೇವತಿ ಬಸಗೌಡ ಅರಳಿಕಟ್ಟಿ (25) ಸಾವನ್ನಪ್ಪಿದ ಮಹಿಳೆ. ಪತಿ ಬಸಗೌಡ ಶಿವಲಿಂಗ ಅರಳಿಕಟ್ಟಿ (35) ಗಾಯಗೊಂಡಿದ್ದಾರೆ.
ಪತಿ ಹಾಗೂ ಪತ್ನಿ ಬೈಕ್ ನಲ್ಲಿ ಚಿಕ್ಕೋಡಿ ತಾಲೂಕಿನ ಯಡೂರಿಗೆ ದೇವರ ದರ್ಶನಕ್ಕೆ ತೆರಳಿದ್ದರು. ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಮಜಲಟ್ಟಿ ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಪರಿಣಾಮ ವಿವಾಹಿತ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.