ರಾಮನಗರ: ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆಯಲ್ಲಿ ಕನಕಪುರದಲ್ಲಿ ನಡೆದಿದೆ. ಜೂಜು ಅಡ್ಡೆ ಮೇಲೆ ಪೊಲೀಸರು (Police) ದಾಳಿ ನಡೆಸಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಅರ್ಕಾವತಿ ನದಿಗೆ ಹಾರಿದ್ದಾನೆ. ಕನಕಪುರದ ತಿಗಳರಹಳ್ಳಿ ಗ್ರಾಮದ ಮರಿಸ್ವಾಮಿ (30) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಜೂಜು ಅಡ್ಡೆ ಮೇಲೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ಮಾಡಿದ್ದರು. ಆಗ ತಪ್ಪಿಸಿಕೊಳ್ಳುವುದಕ್ಕಾಗಿ ನದಿಗೆ ಹಾರಿದ್ದಾನೆ. ನದಿಯಲ್ಲಿ ಈಜಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮರಳಿ ಬಂದಿದ್ದರು. ಆದರೆ ಮೂರು ದಿನಗಳ ನಂತರ ಮರಿಸ್ವಾಮಿ ಶವ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದೆ.
ಸ್ಥಳದಲ್ಲಿ ಮೃತ ಮರಿಸ್ವಾಮಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.