ಮುಂಬೈ : ಕೊರೊನಾ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹೆಮ್ಮಾರಿ ಸೋಂಕು ಬಡಜನರ ಬದುಕನ್ನು ಕಿತ್ತುಕೊಂಡಿದ್ದು, ಎಷ್ಟೋ ಮಂದಿ ಬೀದಿಗೆ ಬಿದ್ದಿದ್ದಾರೆ. ಇನ್ನೊಂದೆಡೆ ಸರ್ಕಾರ ಮಹಾಮಾರಿಯಿಂದ ಬಚಾವ್ ಆಗಲು ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ.
ಆದ್ರೆ ದೇಶದ ಕೋಟ್ಯಂತರ ಬಡವರು ಈ ಮಾಸ್ಕ್ ಕೊಂಡುಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಎಷ್ಟೋ ಮಂದಿ ಮಾಸ್ಕ್ ಧರಿಸದೇ ಸೋಂಕನ್ನು ಅಂಟಿಸಿಕೊಂಡವರೂ ಇದ್ದಾರೆ. ಈ ಎಲ್ಲದರ ಮಧ್ಯೆ ಪುಣೆ ಜಿಲ್ಲೆ ಪಿಂಪ್ರಿ ನಿವಾಸಿ ಬರೋಬ್ಬರಿ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ್ದಾರೆ.
ಹೌದು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದಾರೆ. ಸದ್ಯ ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಶಂಕರ್, ಈ ಮಾಸ್ಕ್ ತೆಳುವಾಗಿದ್ದು, ಗಾಳಿ ಒಳಕ್ಕೆ ಹಾಗೂ ಹೊರ ಹೋಗಲೆಂದೇ ಸಣ್ಣ ಸಣ್ಣ ರಂಧ್ರಗಳನ್ನು ಮಾಡಲಾಗಿದೆ. ಹೀಗಾಗಿ ಉಸಿರಾಡಲು ಯಾವುದೇ ತೊಂದರೆಯಾಗಲ್ಲ. ಆದರೆ ಈ ಮಾಸ್ಕ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.