ಶಿವಮೊಗ್ಗ: ತಾಯಿಯೊಬ್ಬರು ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದಕ್ಕೆ ವಾಹನ ಮಾಲೀಕರಿಗೆ ಕೋರ್ಟ್ ದೊಡ್ಡ ಮೊತ್ತದ ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ತಾಯಿಗೆ 30 ಸಾವಿರ ರೂ. ದಂಡ ವಿಧಿಸಿದೆ. 2024 ರ ಜನವರಿ 30ರಂದು ಪೂರ್ವ ಸಂಚಾರಿ ಠಾಣೆ ಪಿಎಸ್ ಐ ನವೀನ್ ಕುಮಾರ್ ಮಠಪತಿ ಅವರು ನಗರದ ಎಸ್ ಪಿಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮೊಪೆಡ್ ಚಾಲನೆ ಮಾಡಿಕೊಂಡು, ಬಂದಿದ್ದಾನೆ. ಇದನ್ನು ಪಿಎಸ್ ಐ ಗಮನಿಸಿ ಕೇಸ್ ದಾಖಲಿಸಿದ್ದರು.
ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಮಾಲೀಕರಾದ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. ಸದ್ಯ ಕೋರ್ಟ್ ವಾಹನದ ಮಾಲೀಕರಿಗೆ 30 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.