ಕೊರೋನಾ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಇದಕ್ಕೆ ಸಿನಿಮಾ ತಾರೆಯರು, ಆಟಗಾರರು ಸೇರಿದಂತೆ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ವಿಭಿನ್ನ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ
ಸಂಗೀತ ಲೋಕದ ಮಾಂತ್ರಿಕ ಹಂಸಲೇಖ ಅವರು ಕೂಡ ಲಾಕ್ ಡೌನ್ ನ ಸಮಯದಲ್ಲಿ ತಮ್ಮನ್ನು ವಿಶೇಷವಾದ ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲರ ಅಚ್ಚರಿಗೆ ಪಾತ್ರರಾಗಿದ್ದಾರೆ.
ಸಂಗೀತ ದಿಗ್ಗಜ ಹಂಸಲೇಖ ಅವರು ಮನೆಯ ಮುಂದೆ ಇರುವ ಹಳ್ಳವನ್ನು ಮುಚ್ಚುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರೋ ತಮ್ಮ ಮನೆ ಮುಂದೆ ಇರುವ ರಸ್ತೆಯಲ್ಲಿ ಬಿಬಿಎಂಪಿಯವರು ತೋಡಿದ್ದ ಹಳ್ಳವನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಕೆಲಸದಲ್ಲಿ ಹಂಸಲೇಖ ನಿರತರಾಗಿದ್ದರು. ಕೈಗಳಲ್ಲಿ ಸಲಿಕೆ ಹಿಡಿದು, ಜಲ್ಲಿ, ಸಿಮೆಂಟ್ ಕಲಸಿ ಅದನ್ನು ರಸ್ತೆಗೆ ಹಾಕಿ ಸ್ವತಃ ತಾವೇ ಕಾಂಕ್ರಿಟ್ ಹಾಕಿ ಮನೆಯ ಮುಂದೆ ಇದ್ದ ಹಳ್ಳವನ್ನು ಮುಚ್ಚಿದ್ದಾರೆ. ಈ ಮೂಲಕ ಬಿಬಿಎಂಪಿ ಮಾಡಬೇಕಿದ್ದ ಕಾರ್ಯವನ್ನು ಹಂಸಲೇಖ ಅವರು ತಾವೇ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.








