ಬೆಂಗಳೂರು: ಪ್ರಯಾಣಿಕನೊಬ್ಬಾತ ಬಿಎಂಟಿಸಿ ಬಸ್ ಕಂಡಕ್ಟರ್ ಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಹತ್ತಿರ ಈ ಘಟನೆ ನಡೆದಿದೆ. ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಬಸ್ ನಲ್ಲಿ ಪ್ರಯಾಣಿಕರು ತುಂಬಿದ್ದ ವೇಳೆ ಈ ಘಟನೆ ನಡೆದಿದೆ.
ಕಂಡಕ್ಟರ್ ಯೋಗೇಶ್ ಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದ ನಂತರ ಬಸ್ ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದಾನೆ. ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ ನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್ಫೀಲ್ಡ್ ಠಾಣೆ ಪೊಲೀಸರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕಂಡಕ್ಟರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.