ನವದೆಹಲಿ : ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ನಿಂದ (Vikram Lander) ರೋವರ್ (Pragyan Rover) ಹೊರ ಬಂದು, ಅಧ್ಯಯನ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಇಸ್ರೋ (ISRO) ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಚಂದ್ರಯಾನ-3 ರೋವರ್: ಭಾರತದಲ್ಲಿ ತಯಾರಿಸಲಾಗಿದೆ. ಚಂದ್ರನಿಗಾಗಿ ಮಾಡಲ್ಪಟ್ಟಿದೆ. ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಕೆಳಗೆ ಇಳಿಯಿತು. ಚಂದ್ರನ ಮೇಲೆ ಭಾರತ ನಡೆದಾಡಿತು. ಶೀಘ್ರವೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.
ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈನಲ್ಲಿ ಅಧ್ಯಯನ ನಡೆಸಲಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದು ಧೂಳೆಬ್ಬಿಸಿದೆ. ಪ್ರಗ್ಯಾನ್ ರೋವರ್ ಕೆಲ ಗಂಟೆಗಳು ಕಾದು ಹೊರಬಂದಿದೆ ಎನ್ನಲಾಗಿದೆ. ಸುಮಾರು 1,749.8 ಕೆಜಿ ತೂಕದ ಲ್ಯಾಂಡರ್ ಬಂದು ಚಂದ್ರನ ಮೇಲೆ ಹೆಜ್ಜೆ ಇಟ್ಟಾಗ ಅದರ ಸುತ್ತಲೂ ಧೂಳು ಆವರಿಸಿದೆ. ದುರ್ಬಲ ಗುರುತ್ವಾಕರ್ಷಣೆ ಶಕ್ತಿಯ ಕಾರಣದಿಂದ ಆ ದಟ್ಟವಾಗಿರುವ ಧೂಳು ತಕ್ಷಣಕ್ಕೆ ಕಡಿಮೆ ಆಗಲಿಲ್ಲ. ಈ ವೇಳೆ ರೋವರ್ ಹೊರ ಬಂದರೆ, ಆ ಧೂಳಿನ ಕಣಗಳು ರೋವರ್‌ನಲ್ಲಿರುವ ಸೆನ್ಸರ್‌ಗಳು, ಕ್ಯಾಮೆರಾಗಳ ಮೇಲೆ ಕುಳಿತುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಮಯ ಕಾದು ನಂತರ ರೋವರ್ ಹೊರಬಂದಿದೆ. ಸದ್ಯ ರೋವರ್ ಹೊರ ಬಂದು, ಸೋಲಾರ್ ಪ್ಯಾನೆಲ್ ತೆರೆದುಕೊಂಡು ಚಂದ್ರನ ಮೇಲ್ಮೈನಲ್ಲಿ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ.