ರಾಮನಗರ : ಹೈವೇಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-mysuru Expressway) ಮಧ್ಯ ರಾತ್ರಿ ನಡೆದಿದೆ.
ಈ ಘಟನೆ ಬಿಡದಿ ಹತ್ತಿರದ ಕೆಂಪನಹಳ್ಳಿ ಗೇಟ್ ನಲ್ಲಿ ನಡೆದಿದೆ. ಸ್ಕೂಟಿ ತೆಗೆದುಕೊಂಡು ಹೋಗುತ್ತಿದ್ದ ದಂಪತಿ ಅಚಾನಕ್ಕಾಗಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಸನಾವುಲ್ಲಾ ಬೇಗ್ (65) ಹಾಗೂ ನೂರ್‌ಜಹಾನ್ (60) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ದಂಪತಿಗಳು ಬೆಂಗಳೂರಿನ ಬಾಪೂಜಿ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.
ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ರಾಮನಗರಕ್ಕೆ ಬಂದಿದ್ದ ದಂಪತಿ, ಮರಳಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಈ ಕುರಿತು ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








