ಪರಶುರಾಮನ ಸೃಷ್ಟಿಯ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಗಳು ಬೇರೆಡೆಗಿಂತ ಒಂದಷ್ಟು ಭಿನ್ನ. ತನ್ನದೇ ಆದ ರೀತಿ ರಿವಾಜು ನಂಬಿಕೆಗಳೊಂದಿಗೆ ತುಳುವರ ಬದುಕಿನ ಭಾಗವಾಗಿ ತುಳುನಾಡಲ್ಲಿ ಆಚರಣೆಗಳು ಆಚರಿಸಲ್ಪಡುತ್ತದೆ. ಹೆಣ್ಣಿಂದಲೇ ಸೃಷ್ಟಿ ಎಂದು ನಂಬಿರುವ ತುಳುನಾಡು ಹೆಣ್ಣಿಗೆ ಅತ್ಯಂತ ಎತ್ತರವಾದ ಸ್ಥಾನಮಾನವನ್ನು ಕೊಟ್ಟಿದೆ. ಹೆಣ್ಣೇ ಇಲ್ಲಿ ಮನೆಯೊಡತಿ. ಪ್ರಕೃತಿ ಆರಾಧಕರಾದ ತುಳುವರು ಭೂಮಿಯಲ್ಲೂ ಹೆಣ್ಣನ್ನು ಕಂಡು ಆರಾಧಿಸುವವರು.
ಹಿಂದಿನ ಕಾಲದಲ್ಲಿ ಮನೆಮಗಳು ಮೈನೆರೆದಾಗ ಅಂದರೆ ದೊಡ್ಡವಳಾದಾಗ, ಸೃಷ್ಟಿಯ ಕ್ರಿಯೆಗೆ ಅನುವಾದಳು ಎಂದು ಮನೆಮಂದಿ ಸಂಭ್ರಮಿಸುತ್ತಿದ್ದರು. ಮನೆಮಗಳಿಗೆ ಹೊಸಸೀರೆ ಉಡಿಸಿ, ಊರವರನ್ನು ಕರೆದು ಹಬ್ಬದ ಊಟ ಹಾಕಿಸಿ ಖುಷಿ ಪಡುತ್ತಿದ್ದರು.
ಭೂಮಿಯನ್ನು ತಾಯಿ ಎಂದು ಆರಾಧಿಸುವ ತುಳುವರು ವರ್ಷಕೊಮ್ಮೆ ಭೂಮಿಯ ರೂಪದಲ್ಲಿರುವ ಹೆಣ್ಣು ಸೃಷ್ಟಿ ಗೆ ಅನುವಾದಳು ಎಂದು ಸಂಭ್ರಮಿಸುವ ಆಚರಣೆಯೇ ಕೆಡ್ಡಸ.

ಇದು ಕೃಷಿ ಸಂಬಂಧಿ ಆಚರಣೆಯಾಗಿದ್ದು, ಭೂಮಿ ಸೃಷ್ಟಿಗೆ ಅನುವಾಗುವ ಮೂಲಕ ಸಮೃದ್ಧವಾದ ಬೆಳೆ ಬೆಳೆಯಲಿ ಎಂಬ ಆಶಯದೊಂದಿಗೆ ಆಚರಣೆಯಾಗುತ್ತದೆ.
ಮೂರು ದಿನಗಳ ಕಾಲ ನಡೆಯುವ ಈ ಆಚರಣೆಯಲ್ಲಿ ಭೂಮಿತಾಯಿಗೆ ಋತುಸ್ತಾವವಾಗಿರುವುದರಿಂದ ಆಕೆಗೆ ನೋವು ಮಾಡಬಾರದು ಎಂಬ ಕಾರಣಕ್ಕೆ ಭೂಮಿಯನ್ನು ಅಗೆಯುವುದು, ಮರ ಕಡಿಯುವುದು, ಕೃಷಿ ಕೆಲಸ ಮಾಡುವುದು ನಿಷೇಧ ಎಂಬ ಸಂಪ್ರದಾಯ ಆಚರಣೆಯಲ್ಲಿದೆ.
ಹಿಂದಿನ ದಿನಗಳಲ್ಲಿ ನಲ್ಕೆಯವರು (ಭೂತನರ್ತಕರು) ಕೆಡ್ಡಸದ ವಿಶೇಷತೆಗಳ ಪಾಡ್ದನಗಳನ್ನು ಹಾಡಿಕೊಂಡು ಮನೆಮನೆಗೆ ಬರುತ್ತಿದ್ದರು. ಇದಕ್ಕೆ ‘ಕೆಡ್ಡಸ ಲೆಪ್ಪುನೆ’ ಎಂದು ತುಳುವಿನಲ್ಲಿ ಕರೆಯುತ್ತಾರೆ. ಆದರೆ ಇಂದು ಇದು ಮರೆಯಾಗುತ್ತಿದೆ.

ಕೆಡ್ಡಸ ತುಳು ತಿಂಗಳ ‘ಪೊನ್ನಿ’ ಅಥವಾ ‘ಪುಯಿಂತೆಲ್’ ಯ (ಕನ್ನಡದಲ್ಲಿ ಮಕರ ಮಾಸದ) 27 ರ ನಂತರ ಮೂರು ದಿನ ಆಚರಿಸುವ ಆಚರಣೆ. ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಬರುತ್ತದೆ. ಮೊದಲ ದಿನ ಮೊದಲ ಕೆಡ್ಡಸ, ಎರಡನೇ ದಿನ ನಡು ಕೆಡ್ಡಸ ಮತ್ತು ಮೂರನೇ ದಿನ ಕಡೆ ಕೆಡ್ಡಸ.

ಹೆಣ್ಣು ಋತುಮತಿಯಾದಾಗ ಅವಳಿಗೆ ಪೌಷ್ಟಿಕಾಂಶದ ಆಹಾರ ನೀಡಬೇಕೆಂಬ ಸಂದೇಶದೊಂದಿಗೆ ಭೂಮಿ ತಾಯಿಗೆ 7 ಬಗೆಯ ಧಾನ್ಯಗಳನ್ನು ಬೆರೆಸಿ ಬಾಳೆಲೆಯಲ್ಲಿ ಇಡಲಾಗುತ್ತದೆ. ಕೆಡ್ಡಸದ ದಿನ ಮಾಂಸದ ಊಟ ಮಾಡಲೇ ಬೇಕು ಇಲ್ಲದಿದ್ದರೆ ಅವರ ಎಲುಬು ಸವೆಯುತ್ತದೆ ಎಂಬುವುದು ತುಳುಜನರ ನಂಬಿಕೆ.
ಕೆಡ್ಡಸದ ಊಟದ ಜೊತೆ ತನ್ನದೇ ಆದ ವಿಶಿಷ್ಟ ಆಚಾರ ವಿಚಾರಗಳೊಂದಿಗೆ ಶ್ರೀಮಂತವಾಗಿರುವ ತುಳುನಾಡಿನ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ.








