ಭುವನೇಶ್ವರ್: ಭೀಕರ ಸರಣಿ ಅಪಘಾತವೊಂದು ನಡೆದಿದ್ದು, ಮೂವರು ಬಲಿಯಾಗಿದ್ದಾರೆ.
ಅಲ್ಲದೇ, ಈ ಘಟನೆಯಲ್ಲಿ 13 ಜನರ ಸ್ಥಿತಿ ಗಂಭೀರವಾಗಿದೆ. ಒಡಿಸಾದ ಕೊರಾಪುಟ್ ಜಿಲ್ಲೆಯ ಬೊರಿಗುಮ್ಮ ಎಂಬಲ್ಲಿ ಈ ಘಟನೆ ನಡೆದಿದ್ದು, 2 ಬೈಕ್, ಒಂದು ಆಟೋರಿಕ್ಷಾ, ಒಂದು ಟ್ರ್ಯಾಕ್ಟರ್ ಮತ್ತು ಎಸ್‌ಯುವಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಇಬ್ಬರು ಮಹಿಳೆಯರು (Woman) ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಸ್ತೆ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡಿರುವ 13 ಜನರ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ಕೂಡಲೇ ಗುಣಮುಖರಾಗಲೆಂದು ಸಿಎಂ ಹಾರೈಸಿದ್ದಾರೆ.
ಎಸ್ ಯುವಿ ಕಾರು ಹಾಗೂ ಆಟೋ ರಿಕ್ಷಾ ಒಂದೇ ಮಾರ್ಗವಾಗಿ ಚಲಿಸುತ್ತಿದ್ದವು. ವೇಗವಾಗಿ ಚಲಿಸುತ್ತಿದ್ದ ಆಟೋವನ್ನು ಎಸ್ ಯುವಿ ಹಿಂದೆ ಹಾಕಲು ಯತ್ನಿಸುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಬಂದಿದೆ. ಟ್ರ್ಯಾಕ್ಟರ್ ಹಿಂದಿಕ್ಕಲು ಪ್ರಯತ್ನಿಸುವಾಗ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಬೈಕ್ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ. ಆಗ ಚಾಲಕನ ನಿಯಂತ್ರಣ ತಪ್ಪಿ ಕಾಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ರಿಕ್ಷಾ ಮಗುಚಿ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 15 ಜನ ಪ್ರಯಾಣಿಕರು ರಸ್ತೆಗೆ ಬಿದ್ದಿದ್ದಾರೆ. ಈ ಪೈಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 13 ಜನರ ಸ್ಥಿತಿ ಗಂಭೀರವಾಗಿದೆ. ಎದುರುಗಡೆಯಿಂದ ಬಂದ ಇನ್ನೊಂದು ಬೈಕ್ ಎಸ್‌ಯುವಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.