ನ್ಯೂಯಾರ್ಕ್: ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೊಮ್ಮೆ ಭಾರತದ ರಾಜತಾಂತ್ರಿಕ ಗತ್ತು ಪ್ರದರ್ಶನವಾಗಿದೆ. ಭಾರತದ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ತಮ್ಮ ಕಠಿಣ ಮಾತುಗಳ ಮೂಲಕ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ ಮಾಡಿದ್ದಾರೆ. ಪ್ರಶ್ನೆ ಕೇಳುವ ನೆಪದಲ್ಲಿ ಭಾರತದ ಮೇಲೆ ಕೆಸರೆರಚಲು ಬಂದ ಪಾಕಿಸ್ತಾನಿ ಪತ್ರಕರ್ತನಿಗೆ ಜೈಶಂಕರ್ ನೀಡಿದ ತೀಕ್ಷ್ಣ ಉತ್ತರ ಈಗ ಇಡೀ ವಿಶ್ವದ ಗಮನ ಸೆಳೆದಿದೆ.
ಪತ್ರಕರ್ತನ ವೇಷದಲ್ಲಿದ್ದ ಪಾಕ್ ಏಜೆಂಟ್ ಗೆ ಜೈಶಂಕರ್ ಪಂಚ್
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮ ಸಂವಾದದಲ್ಲಿ ಜೈಶಂಕರ್ ಅವರು ಹಡಗು ಮತ್ತು ನಾವಿಕರ ಭದ್ರತೆಯ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಮಾಧ್ಯಮ ಪ್ರತಿನಿಧಿಯೊಬ್ಬ ಎದ್ದು ನಿಂತು, ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಯಾವಾಗ ನಿಲ್ಲಿಸುತ್ತದೆ ಎಂದು ಉದ್ಧಟತನದಿಂದ ಮತ್ತು ಪ್ರಚೋದನಾಕಾರಿಯಾಗಿ ಪ್ರಶ್ನಿಸಿದನು. ತನ್ನ ದೇಶವೇ ಭಯೋತ್ಪಾದನೆಯ ಕಾರ್ಖಾನೆಯಾಗಿದ್ದರೂ ಭಾರತದ ವಿರುದ್ಧ ಆರೋಪ ಹೊರಿಸಲು ಯತ್ನಿಸಿದ ಪಾಕಿಸ್ತಾನದ ಈ ಹಳೆಯ ಚಾಳಿಗೆ ಜೈಶಂಕರ್ ಅವರು ಕಣ್ಣಿನ ರೆಪ್ಪೆ ಬಡಿಯುವಷ್ಟರಲ್ಲಿ ಉತ್ತರ ಸಿದ್ಧಪಡಿಸಿದ್ದರು.
ಭಯೋತ್ಪಾದಕ ದೇಶವೇ ನಮಗೆ ಪ್ರಶ್ನೆ ಕೇಳುತ್ತಿದೆಯಾ?
ಆ ಪತ್ರಕರ್ತನ ಕಡೆಗೆ ಅತ್ಯಂತ ಲಘುವಾಗಿ ಆದರೆ ತೀವ್ರ ತೀಕ್ಷ್ಣವಾಗಿ ನೋಡಿ ಉತ್ತರಿಸಿದ ಜೈಶಂಕರ್, ಭಯೋತ್ಪಾದಕ ದೇಶವೇ ನನಗೆ ಈ ಪ್ರಶ್ನೆಯನ್ನು ಕೇಳುತ್ತಿದೆಯಾ? ಸಾಕು ಬಿಡಿ! ಅಂದರೆ ಎ ಟೆರರಿಸ್ಟ್ ಕಂಟ್ರಿ ಈಸ್ ಆಸ್ಕಿಂಗ್ ಮಿ ದ್ಯಾಟ್ ಕ್ವೆಶ್ಚನ್, ಕಮ್ ಆನ್ ಎಂದು ಹೇಳಿದರು. ಸಚಿವರ ಈ ಒಂದೇ ಒಂದು ವಾಕ್ಯ ಇಡೀ ಪಾಕಿಸ್ತಾನದ ಅಸ್ತಿತ್ವವನ್ನೇ ಜಾಗತಿಕ ವೇದಿಕೆಯಲ್ಲಿ ಬೆತ್ತಲೆ ಮಾಡಿತು. ಸಚಿವರ ಈ ದಿಟ್ಟ ಮತ್ತು ಸಮಯಪ್ರಜ್ಞೆಯ ಪ್ರತ್ಯುತ್ತರಕ್ಕೆ ಅಲ್ಲಿದ್ದ ಇತರ ಜಾಗತಿಕ ಮಾಧ್ಯಮ ಪ್ರತಿನಿಧಿಗಳು ಒಂದು ಕ್ಷಣ ದಂಗಾದರು.
ಈ ಪ್ರಸಂಗಕ್ಕೆ ಮತ್ತಷ್ಟು ಮೆರುಗು ನೀಡಿದವರು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ. ಪಾಕ್ ಪತ್ರಕರ್ತ ಮತ್ತೇನೋ ವಾದ ಮಾಡಲು ಮುಂದಾದಾಗ ಮಧ್ಯಪ್ರವೇಶಿಸಿದ ಅವರು, ನಿಮಗೆ ಸಿಗಬೇಕಾದ ಉತ್ತರ ಅತ್ಯಂತ ಸ್ಪಷ್ಟವಾಗಿ ಮತ್ತು ಜೋರಾಗಿ ಸಿಕ್ಕಿದೆ ಎಂದು ಹೇಳಿ ಸಭೆಯನ್ನು ಮುಂದುವರಿಸಿದರು. ಪಾಕಿಸ್ತಾನವು ಸದಾ ತಾನು ಬೆಳೆಸಿದ ಭಯೋತ್ಪಾದನೆಯ ಬಲಿಪಶು ಎಂದು ಬಿಂಬಿಸಿಕೊಳ್ಳಲು ಮತ್ತು ಭಾರತವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತದೆ. ಆದರೆ ಭಾರತೀಯ ರಾಜತಾಂತ್ರಿಕತೆಯ ಮಾಸ್ಟರ್ ಜೈಶಂಕರ್ ಅವರ ಈ ಉತ್ತರ ಆ ಸುಳ್ಳಿನ ಮುಖವಾಡವನ್ನು ವಿಶ್ವದ ಎದುರು ಕಿತ್ತೆಸೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜೈಶಂಕರ್ ಸ್ವಾಗ್ ವೈರಲ್
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೈಶಂಕರ್ ಅವರ ಈ ವೀಡಿಯೋ ಭಾರಿ ವೈರಲ್ ಆಗುತ್ತಿದ್ದು, ಭಾರತೀಯರು ವಿದೇಶಾಂಗ ಸಚಿವರ ಈ ಮಾಸ್ ಡೈಲಾಗ್ ಗೆ ಫಿದಾ ಆಗಿದ್ದಾರೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಕಟ್ಟಿಹಾಕಲು ಯತ್ನಿಸುವವರಿಗೆ ಜೈಶಂಕರ್ ಹೇಗೆ ಪಾಠ ಕಲಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಸಿಕ್ಕ ಈ ಅವಮಾನ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.








