ಚಾಮರಾಜನಗರ: ಬರೋಬ್ಬರಿ ಸುಮಾರು 100 ಕೋಟಿ ರೂ.ನಷ್ಟು ಬಿಯರ್ ಹಾಗೂ ಕಚ್ಚಾ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಜಿಲ್ಲೆಯ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ 98.56 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕೋಟಿ ಕೋಟಿ ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ. 6.03 ಲಕ್ಷ ರೂ. ಬಿಯರ್ ಪೆಟ್ಟಿಗೆ, ಟ್ಯಾಂಕ್‌ನಲ್ಲಿದ್ದ 66.16 ಲಕ್ಷ ಲೀಟರ್ ಬಿಯರ್, 6.5 ಲಕ್ಷ ಕೆ.ಜಿ ಕಚ್ಚಾ ವಸ್ತು ಸೇರಿದಂತೆ 98.52 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮವಾಗಿ ಸಂಗ್ರಹಿಸಿದ್ದ 7,000 ಬಿಯರ್ ರಟ್ಟಿನ ಪೆಟ್ಟಿಗೆಗಳು ಕೂಡ ಪತ್ತೆಯಾಗಿವೆ. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.