ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಂದರೂ ಪ್ರವಾಸಿ ಮಂದಿರ ಓಪನ್ ಮಾಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಂಜನಗೂಡು (Nanjangud) ಪ್ರವಾಸಿ ಮಂದಿರವನ್ನು (Pravasi mandira) ನಿರ್ವಹಣೆ ಮಾಡುವ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಇಂದು ನಂಜನಗೂಡು ಪ್ರವಾಸ ಕೈಗೊಂಡಿದ್ದರು.
ಹೀಗಾಗಿ ಅವರು ಬೆಳಗ್ಗೆ ವಿಶ್ರಾಂತಿಗಾಗಿ ಪ್ರವಾಸಿ ಮಂದಿರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕಾರಿನಲ್ಲಿಯೇ ಕುಳಿತುಕೊಂಡಿದ್ದರು. ಆದರೂ ಯಾವೊಬ್ಬ ಅಧಿಕಾರಿ ಅಲ್ಲಿಗೆ ಬಂದಿಲ್ಲ. ಇದರಿಂದಾಗಿ ಬೇಸರಗೊಂಡ ಕುಮಾರಸ್ವಾಮಿ ಮರಳಿ ಕಾರಿನಲ್ಲಿಯೇ ಹೋಗಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಪ್ರವಾಸಿ ಮಂದಿರಕ್ಕೆ ಬರುವ ವಿಚಾರವನ್ನು ಮೊದಲೇ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಪ್ರವಾಸ ಪಟ್ಟಿಯನ್ನು ಸಚಿವಾಲಯದ ಸಿಬ್ಬಂದಿ ಬಿಡುಗಡೆ ಮಾಡಿದ್ದರು. ಪ್ರವಾಸಿ ಮಂದಿರದ ಬಾಗಿಲು ತೆರೆಯದ್ದಕ್ಕೆ ಕಾರಿನಲ್ಲಿದ್ದ ಮಾಜಿ ಸಚಿವ ಸಾ.ರಾ. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.