ತಿರುವನಂತಪುರಂ: ಧಾರಾಕಾರ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಜಲಸ್ಫೋಟ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಮನೆಗಳು ಕೊಚ್ಚಿ ಹೋಗಿವೆ. ಗುಡ್ಡ ಕುಸಿದು, ಮಣ್ಣಿನಡಿ ಮನೆ, ನೂರಾರು ಜನರು ಸಿಲುಕಿದ್ದಾರೆ. ಸದ್ಯ ಸಾವನ್ನಪ್ಪಿದವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ವಯನಾಡಿನ (Wayanad) ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಚೂರಲ್ಮಲಾ ಗ್ರಾಮ ಈಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಬೆಳಗಿನ ಜಾವ 2 ರಿಂದ 6 ಗಂಟೆಯ ನಡುವೆ ಮೂರು ಬಾರಿ ಭೂಕುಸಿತಗಳು ಸಂಭವಿಸಿವೆ. ಭಾರೀ ಭೂಕುಸಿತದ ನಂತರ ಚೂರಲ್ಮಲಾ (Chooralmala) ಗ್ರಾಮದ ಅಂಗಡಿಗಳು, ವಾಹನಗಳು ನಾಶವಾಗಿದೆ. ಗ್ರಾಮದಲ್ಲಿನ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಜೊತೆಗೆ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ. ನೂರಕ್ಕೂ ಹೆಚ್ಚು ಜನ ಗ್ರಾಮದಲ್ಲಿ ಸಿಲುಕಿದ್ದಾರೆ. ಹೆಚ್ಚಿನ ಭಾಗಕ್ಕೆ ಇನ್ನೂ ರಕ್ಷಣಾ ತಂಡ ಪ್ರವೇಶಿಸದ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
8 ಮೀಟರ್ ಉದ್ದದ ನದಿ ಜಲ ಪ್ರಳಯದ ನಂತರ ರಭಸದಿಂದ ಹರಿಯುತ್ತಿದ್ದು, ಈ ಪ್ರದೇಶಗಳ ಬೆಟ್ಟದಲ್ಲಿ ಸಣ್ಣ ಸಣ್ಣ ಭೂಕುಸಿತಗಳು ಈಗಲೂ ಸಂಭವಿಸುತ್ತಿದೆ. ಪ್ರದೇಶಗಳು ದುರ್ಗಮವಾಗಿರುವುದರಿಂದ, ಜನರು ಇನ್ನೂ ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆಯೇ ಎನ್ನುವುದು ತಿಳಿದು ಬಂದಿಲ್ಲ.








