ವಯನಾಡು: ಕೇರಳದ ವಯನಾಡಿನಲ್ಲಿ ಎಲ್ಲರ ಬದೂಕು ಕೊಚ್ಚಿ ಹೋಗಿದೆ. ಸಾವಿನ ಸಂಖ್ಯೆ 300ರ ಗಡಿಗೆ ಬಂದು ನಿಂತಿದೆ. ಹೊಟ್ಟೆ ತುಂಬಿಸಿಕೊಳ್ಳಬೇಕೆಂದು ಸ್ವಂತ ಊರು ಬಿಟ್ಟು ಹೋದವರ ಬದುಕೂ ಅಲ್ಲಿ ಸತ್ತು ಹೋಗಿದೆ. ಕರ್ನಾಟಕದ ಮೂವರು ಸಾವನ್ನಪ್ಪದರೆ, 9 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸಂತ್ರಸ್ತರ ಕುಟುಂಬದೊಂದಿಗೆ ಮಾತನಾಡಿದ ಸಾಂತ್ವನ ಹೇಳಿದ್ದಾರೆ.
ಭೂಕುಸಿತದಲ್ಲಿ (Landslides) ಆಶ್ರಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಾದೇವಿ ಎಂಬುವವರೊಂದಿಗೆ ಸಿಎಂ ಸಿದ್ದರಾಮಯ್ಯ (Siddaramaiah) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದಿಂದ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.
ಸಿಎಂ ಕರೆ ಮಾಡುತ್ತಿದ್ದಂತೆ ವೃದ್ಧ ಮಹಿಳೆ ಕಣ್ಣೀರು ಹಾಕಿದ್ದಾರೆ. ಊರಲ್ಲಿ ಮಳೆಯಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ ಅಂತ ಊರು ಬಿಟ್ಟೆ. 18 ವರ್ಷದವಳಿದ್ದಾಗಲೇ ಒಂದೂವರೆ ವರ್ಷದ ಮಗುವನ್ನು ಹೊತ್ತು, ನೀಲಗಿರಿ ಕಾಫಿ ತೋಟಕ್ಕೆ ಬಂದು ಕೆಲಸ ಮಾಡಲು ಆರಂಭಿಸಿದೆ. ಈಗ ಎಲ್ಲವನ್ನೂ ಕಳೆದುಕೊಂಡು ಮತ್ತೆ ಅದೇ ಸ್ಥಿತಿಗೆ ಬಂದಿದ್ದೇನೆ. ನನಗೆ 70 ವರ್ಷ. ದುಡಿಯಲು ಶಕ್ತಿಯಿಲ್ಲ. ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆ ಎಂದು ಗೋಗರೆದಿದ್ದಾರೆ.
ಕಣ್ಣ ಮುಂದೆಯೇ 9 ಮಕ್ಕಳನ್ನು ನೀರು ಹೊತ್ತುಕೊಂಡು ಹೋಗಿದೆ. ಮೂರು ಮನೆ ಸಂಪೂರ್ಣ ಮಟ್ಟ (ನೆಲಸಮ) ಆಗೋಗಿದೆ. ನನ್ನ ಬಳಿ ಮೊಮ್ಮಗಳು ಬಿಟ್ಟು ಬೇರೆ ಯಾರೂ ಇಲ್ಲ ಎಂದು ಗೋಳಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿದ್ದಾರೆ.
ಮಂಡ್ಯ ಮೂಲದ ಸಂತ್ರಸ್ತೆ ಚೈತ್ರಾ ಕೂಡ ಸಿಎಂ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನಮಗೇನಾದ್ರೂ ಪರಿಹಾರ ಮಾಡಿಕೊಡಿ, ಈಗ ಮನೆಯೂ ಇಲ್ಲ, ಜಾಗವೂ ಇಲ್ಲ ಉಳಿದುಕೊಳ್ಳಲು ಏನಾದರೂ ಪರಿಹಾರ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ. ಸಿಎಂ ಭರವಸೆ ನೀಡಿದ್ದಾರೆ.








