ಆಕಾಶ್ ಚೋಪ್ರಾ ವರ್ಲ್ಡ್ ಇಲೆವೆನ್ ನಲ್ಲಿ ಕಿಂಗ್ ಕೊಹ್ಲಿಗಿಲ್ಲ ಸ್ಥಾನ..!
ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಟೀಮ್ ಇಂಡಿಯಾ ತಂಡವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಕೈವಶ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ಮೇಲೆ ಪ್ರಶಂಸೆಗಳ ಮಳೆಯೇ ಸುರಿಯುತ್ತಿದೆ.
ವಿಶ್ವ ಕ್ರಿಕೆಟ್ ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿ ಭಾರತವನ್ನು 8 ವಿಕೆಟ್‍ಗಳಿಂದ ಸೋಲಿಸಿದ ಕಿವೀಸ್ ತಂಡವನ್ನು ಮಾಜಿ ಕ್ರಿಕೆಟಿಗರು ಹೊಗಳುತ್ತಿದ್ದಾರೆ.
ವಿಶೇಷವಾಗಿ ಕಳೆದ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಫೈನಲ್‍ಗೆ ತಲುಪಿದ್ದು, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಮತ್ತೆ ಭಾರತವನ್ನು ಸೋಲಿಸಿದ ಕೀವಿಸ್ ತಂಡವನ್ನು ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಆಕಾಶಕ್ಕೆ ಎತ್ತಿ ಹಿಡಿಯುತ್ತಿದ್ದಾರೆ.
ಈ ಮಧ್ಯೆ ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಮತ್ತು ನಿರೂಪಕ ಆಕಾಶ್ ಚೋಪ್ರಾ, ಕಿವೀಸ್ ತಂಡವನ್ನು ಸೋಲಿಸಬಲ್ಲ ಬಲಿಷ್ಠ ತಂಡ ಇದೇ ಎಂದು ತಮ್ಮ ವಿಶ್ವ ಇಲೆವೆನ್ ತಂಡವನ್ನು ಘೋಷಿಸಿದ್ದಾರೆ. ಆದ್ರೆ ಈ ತಂಡದಲ್ಲಿ ಕಿಂಗ್ ಕೊಹ್ಲಿಗೆ ಸ್ಥಾನ ನೀಡಿಲ್ಲ.
ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡ ಆಕಾಶ್ ಚೋಪ್ರಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ತಂಡದಿಂದ ಕೈಬಿಟ್ಟಿದ್ದಾರೆ. ಭಾರತದ ಆಟಗಾರರಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಮಾತ್ರ ಸ್ಥಾನ ನೀಡಿದ್ದಾರೆ.
“ರೋಹಿತ್ ಶರ್ಮಾ ಮತ್ತು ಶ್ರೀಲಂಕಾದ ಆಟಗಾರ ಕರುಣರತ್ನ ವಿಶ್ವ ಇಲೆವೆನ್ ತಂಡದಲ್ಲಿ ಆರಂಭಿಕ ಆಟಗಾರರಾಗಿದ್ದಾರೆ. ಆಸೀಸ್ ಕ್ರಿಕೆಟಿಗ ಮಾರ್ನಸ್ ಲಾಬುಶೆನ್ ಮೂರನೇ ಸ್ಥಾನದಲ್ಲಿದ್ದಾರೆ.
ಜೋ ರೂಟ್ ನಾಲ್ಕನೇ ಆಟಗಾರ. ಐದನೇ ಸ್ಥಾನದಲ್ಲಿ ಸ್ಟೀವ್ ಸ್ಮಿತ್, ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಆರನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ ವಿಕೆಟ್ ಕೀಪರ್ ಮತ್ತು ಸ್ಪಿನ್ನರ್ ಕೋಟಾದಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಸ್ಟುವರ್ಟ್ ಬ್ರಾಡ್, ಜೋಶ್ ಹ್ಯಾಜಂಲ್‍ವುಡ್ ತಂಡದ ವೇಗಿಗಳಾಗಿದ್ದಾರೆ.
ಆದ್ರೆ ಆಕಾಶ್ ಚೋಪ್ರಾ ಅವರ ಈ ವಿಶ್ವ ಇಲೆವೆನ್ ತಂಡಕ್ಕೆ ನೆಟ್ಟಿಗರು ಮಿಶ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕಾಶ್ ಚೋಪ್ರಾ ವಿರುದ್ಧ ತಿರುಗಿಬಿದ್ದಿದ್ದಾರೆ.