ಎಎಪಿಯ ರಾಜ್ಯ ಕಚೇರಿ ಉದ್ಘಾಟನೆ
ಆಮ್ ಆದ್ಮಿ ಪಾರ್ಟಿಯ ನೂತನ ರಾಜ್ಯ ಪ್ರಧಾನ ಕಚೇರಿಯು ಗುರುವಾರ ಉದ್ಘಾಟನೆಯಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ವಕ್ತಾರ ದಿಲೀಪ್ ಪಾಂಡೆಯವರು ಉದ್ಘಾಟನೆ ಮಾಡಿದರು.
ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್‌ನಲ್ಲಿ ತೆರೆಯಲಾಗಿರುವ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿಲೀಪ್ ಪಾಂಡೆ, “ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಾಣುತ್ತಿದ್ದೇವೆ, ದೆಹಲಿ, ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಭರ್ಜರಿ ಬಹುಮತದೊಂದಿಗೆ ಎಎಪಿ ಅಧಿಕಾರಕ್ಕೆ ಬರಲಿದೆ. ಬಿಬಿಎಂಪಿ ಚುನಾವಣೆಯಿಂದಲೇ ಎಎಪಿಯ ವಿಜಯಯಾತ್ರೆ ಆರಂಭವಾಗುವ ನಿರೀಕ್ಷೆಯಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ರಾಜ್ಯದಲ್ಲಿ ಎಎಪಿ ಸೇರ್ಪಡೆಯು ಜನಾಂದೋಲನವಾಗಲಿದ್ದು, ಇದಕ್ಕೆ ಈ ನೂತನ ಕಚೇರಿ ಸಹಕಾರಿಯಾಗಲಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಎಎಪಿಯನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡಬೇಕು. ಭ್ರಷ್ಟ ಹಾಗೂ ನಿಷ್ಕ್ರಿಯ ಪಕ್ಷಗಳನ್ನು ಬದಿಗೊತ್ತಿ, ಸ್ವಚ್ಛ ಹಾಗೂ ಜನಪರ ಆಡಳಿತ ನೀಡುವ ಎಎಪಿಯನ್ನು ಅಧಿಕಾರಕ್ಕೆ ತರಲು ಕೈಜೋಡಿಸಬೇಕು” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಭಾಸ್ಕರ್ ರಾವ್, ಮುಖ್ಯಮಂತ್ರಿ ಚಂದ್ರು ಮತ್ತಿತರ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.








