ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆ್ಯರನ್ ಫಿಂಚ್ ವಿದಾಯ – ಏಕದಿನ ಬಳಿಕ T20ಯಿಂದಲೂ ನಿವೃತ್ತಿ…
T20I ಕ್ರಿಕೆಟ್‌ನ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ಆ್ಯರನ್ ಫಿಂಚ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದ ಫಿಂಚ್ ಇದೀಗ T20 ಯಿಂದಲೂ ಹೊರನಡೆದಿದ್ದಾರೆ.
ಟಿ20 ಯಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿರುವ ಫಿಂಚ್ 2021 ರಲ್ಲಿ ನಡೆದ T20 ವಿಶ್ವಕಪ್ ನ ವಿಜೇತ ತಂಡದ ಭಾಗವಾಗಿದ್ದರು. ಫಿಂಚ್, ರಾಷ್ಟ್ರೀಯ ತಂಡಕ್ಕೆ ವಿದಾಯ ಘೋಷಿಸಿದ್ದರೂ ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL) ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುವುದನ್ನ ಮುಂದುವರೆಸಲಿದ್ದಾರೆ.
2022 ಫಿಂಚ್ ನಾಯಕತ್ವಕ್ಕೆ ಉತ್ತಮವಾಗಿರಲಿಲ್ಲ. ತವರು ನೆಲದಲ್ಲಿ ನಡೆದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ನಾಕೌಟ್ ಹಂತಕ್ಕೇರಲು ವಿಫಲವಾದ ಕಾರಣ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದರು. ಕ್ರಿಕೆಟ್ ಗೆ ವಿದಾಯ ಹೇಳುವ ಕುರಿತು ಫಿಂಚ್ ತಮ್ಮ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. “ನಾನು 2024 ರ ಟಿ 20 ವಿಶ್ವಕಪ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ನಿವೃತ್ತಿ ಪಡೆಯಲು ಇದು ಸರಿಯಾದ ಸಮಯ. ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ನಿರ್ಮಿಸಲು ಮತ್ತು ಹೊಸ ನಾಯಕನನ್ನು ಹೊಂದಿಸಲು ನಾನು ಮ್ಯಾನೇಜ್‌ಮೆಂಟ್‌ಗೆ ಸಮಯ ನೀಡಬೇಕು. 12 ವರ್ಷಗಳ ಕಾಲ ನಾಯಕತ್ವ ವಹಿಸಿದ್ದು, ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಆಡಿದ್ದು ಅದ್ಭುತವಾಗಿದೆ” ಎಂದು ಹೇಳಿದ್ದಾರೆ.
ಆ್ಯರನ್ ಫಿಂಚ್ ಟಿ20 ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾಗೆ ನಾಯಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 2013 ನಾಯಕತ್ವ ವಹಿಸಿಕೊಂಡ ಅವರು 76 ಪಂದ್ಯಗಳಿಂದ 3120 ರನ್ ಗಳಿಸಿದ್ದಾರೆ. ಈ ಮೂಲಕ ನಾಯಕನಾಗಿ ಆಸ್ಟ್ರೆಲಿಯ ಪರ ಅತಿ ಹೆಚ್ಚು T20 ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಫಿಂಚ್ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ್ದರು. 146 ODI ಪಂದ್ಯಗಳ ಮೂಲಕ 5406 ರನ್ ಗಳಿಸಿದ್ದಾರೆ. ಟಿ20 103 ಪಂದ್ಯಗಳನ್ನಾಡಿದ್ದು 3120 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 19 ಶತಕಗಳನ್ನ ಗಳಿಸಿದ್ದಾರೆ.
Aaron Finch : Aaron Finch announces retirement from international cricket….