ಆರ್ ಸಿಬಿ ತಂಡ ಸೇರಿಕೊಂಡ ಒಂಟಿ ಸಲಗ : ಚಂಡಮಾರುತಕ್ಕೆ ಸ್ವಾಗತ ಎಂದ ಫ್ಯಾನ್ಸ್
ದುಬೈ : ಇದೇ ತಿಂಗಳ 19 ರಿಂದ ದುಬೈನಲ್ಲಿ ಇಂಡಿಯಲ್ ಪ್ರೀಮಿಯರ್ ಲೀಗ್ ನ ಇನ್ನುಳಿದ ಪಂದ್ಯಗಳು ಆರಂಭವಾಗಿವೆ. ಈಗಾಗಲೇ ಐಪಿಎಲ್ ಗಾಗಿ ದುಬೈನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ಆರಂಭವಾಗಿವೆ.
ಎಲ್ಲ ತಂಡಗಳು ಸದ್ಯ ದುಬೈನಲ್ಲಿವೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಜರ್ಬದಸ್ತ್ ಸುದ್ದಿಯೊಂದು ಸಿಕ್ಕಿದ್ದು, ಮಿಸ್ಟರ್ 360, ಆರ್ ಸಿಬಿ ಪಾಲಿನ ಆಪತ್ಭಾಂದವ, ರೆಂಡ್ ಅಂಡ್ ಗೋಲ್ಡ್ ಪಡೆಯ ಒಂಟಿ ಸಲಗ ಎಬಿಡಿವಿಲಿಯರ್ಸ್ ತಂಡ ಸೇರಿಕೊಂಡಿದ್ದಾರೆ.
ಹೌದು..! ಆರ್ ಸಿಬಿ ಅಭಿಮಾನಿಗಳ ಹಾಟ್ ಫೇವರೇಟ್ ಆಗಿರುವ ಎಬಿಡಿ ಸೋಮವಾರ ತಂಡ ಸೇರಿಕೊಂಡಿದ್ದಾರೆ. ಆರ್ ಸಿಬಿ ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಟೂರ್ನಿ ಆರಂಭಗೊಳ್ಳಲು ಕೆಲ ದಿನ ಮಾತ್ರ ಬಾಕಿ ಉಳಿದಿರುವ ಕಾರಣ ಎಲ್ಲ ತಂಡದ ಆಟಗಾರರು ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಎಬಿಡಿ ಕೂಡ ಆರ್ಸಿಬಿ ಸೇರಿಕೊಂಡಿರುವ ಕಾರಣ ತಂಡಕ್ಕೆ ಆನೆಬಲ ಬಂದಂತಾಗಿದೆ.
ಇನ್ನು ಎಬಿಡಿ ತಂಡ ಸೇರಿಕೊಳ್ಳುವುದರ ಬಗ್ಗೆ ಆರ್ ಸಿಬಿ ಪ್ರಾಂಚೈಸಿ ಇನ್ ಸ್ಟ್ರಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಂಡಮಾರುತ ತಂಡ ಸೇರಿಕೊಂಡಿದೆ ಎಂದು ಬರೆದುಕೊಂಡಿದೆ.
ಇತ್ತ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಎಡಿಬಿ ಗ್ರ್ಯಾಂಡ್ ವೆಲ್ ಕಮ್ ಮಾಡುತ್ತಿದ್ದಾರೆ.