ಕೊಲ್ಕೊತ್ತಾ: ಮೂರು ಅಂತಸ್ಥಿತ ಕಟ್ಟಡವೊಂದು ದಿಡೀರ್ ಕುಸಿದ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಿಶ್ಚಿಂತಪುರ ಗ್ರಾಮದಲ್ಲಿ ನಡೆದಿದೆ. ನದಿ ನಾಲೆಯ ಕಾಲುವೆಯ ಪಕ್ಕದಲ್ಲೇ ಅಕ್ರಮವಾಗಿ ಕಟ್ಟಿದ್ದ ಈ ಕಟ್ಟಡ ಇಂದು ಬೆಳಗ್ಗೆ ದಿಡೀರ್ ಕುಸಿದಿದ್ದು, ಕಟ್ಟಡದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕಟ್ಟಡ ಅಲುಗಾಡಿದ ಅನುಭವ ನಿವಾಸಿಗಳಿಗೆ ಆಗಿದೆ. ಕೂಡಲೇ ಕಟ್ಟಡದಲ್ಲಿದ್ದ ನಿವಾಸಿಗಳು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಮನೆಗಳಿಂದ ಹೊರಗೆ ಬಂದ ಕೆಲವೇ ನಿಮಿಷಗಳಲ್ಲಿ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯ ಆಗಿಲ್ಲ, ಆದರೆ, ಮನೆಗಳಲ್ಲಿದ್ದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಬರಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಲೆಗೆ ಹೊಂದಿಕೊಂಡಂತೆ ಅಕ್ರಮವಾಗಿ ಈ ಕಟ್ಟಡ ಕಟ್ಟಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಉದ್ಯಮಿ ನಿಮಾಯಿ ಸಮಂತಾ ಎಂಬಾತನಿಗೆ ಈ ಕಟ್ಟಡ ಸೇರಿದ್ದು, ಕಾಲುವೆಯ ಪಕ್ಕದಲ್ಲೇ ಅಕ್ರಮವಾಗಿ ಕಟ್ಟಡ ಕಟ್ಟಿದ್ದ ಎಂದು ಆರೋಪಿಸಲಾಗಿದೆ.
ಕಳೆದ ಒಂದು ವಾರದಿಂದ ಕಟ್ಟಡ ಪಕ್ಕದಲ್ಲಿದ್ದ ನಾಲೆಯನ್ನು ಜೆಸಿಬಿ ಮೂಲಕ ಕ್ಲೀನಿಂಗ್ ಮಾಡಲಾಗುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಂದ ನಾಲೆ ಕ್ಲೀನಿಂಗ್ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಗುತ್ತಿಗೆದಾರ ಜೆಸಿಬಿ ಬಳಸಿ ಕೆಲಸ ಮಾಡಿದ್ದೇ ಕಟ್ಟಡ ಕುಸಿತಕ್ಕೆ ಕಾರಣ ಎನ್ನುವುದು ಕೆಲ ಸ್ಥಳೀಯರ ಆರೋಪವಗಿದೆ.








