ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಡಿಎ ಭೂಸ್ವಾಧೀನ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿಗಳ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೊಡಿಗೇನಹಳ್ಳಿ, ಯಲಹಂಕದಲ್ಲಿರುವ ಮನೆ, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಅವರ ಮನೆ ಮತ್ತು ಸಂಬಂಧಿಕರ ಮನೆ ಸೇರಿದಂತೆ 6 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಸುಧಾ ಅವರ ಭವ್ಯ ಬಂಗಲೆಯಲ್ಲಿ ಎಸಿಬಿ ಪರಿಶೀಲನೆ ಮುಂದುವರೆದಿದ್ದು, ಈ ವೇಳೆ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ.ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಬಿ ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.
ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಡಾ. ಸುಧಾ ಅವರ ಮನೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಂದೆ ಸೊರಬದಲ್ಲಿ ತಹಶೀಲ್ದಾರ್ ಆಗಿದ್ದ ಡಾ. ಸುಧಾ ಶಿವಮೊಗ್ಗದಲ್ಲೇ ಬೇರೆ ಬೇರೆ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎಯಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂಸ್ವಾಧೀನ ಅಧಿüಕಾರಿಯಾಗಿದ್ದರು. ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿರುವ ಡಾ. ಸುಧಾ ಅಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ನಿದ್ದೆಗಣ್ಣಿನಲ್ಲಿದ್ದ ಕೆಎಎಸ್ ಅಧಿಕಾರಿಗೆ ಶಾಕ್..!
ಇಂದು ಬೆಳಿಗ್ಗೆ 6.30ಕ್ಕೆ ಎಸಿಬಿ ಅಧಿಕಾರಿಗಳ ತಂಡ ಕೆಎಎಸ್ ಅಧಿಕಾರಿ ಸುಧಾ ಮನೆ ಬಾಗಿಲಲ್ಲಿ ನಿಂತಿತ್ತು. ವೀಕೆಂಡ್‍ನ ನಿದ್ದೆಗಣ್ಣಿನಲ್ಲಿದ್ದ ಸುಧಾ ಅವರ ಕೊಡಿಗೆಹಳ್ಳಿಯ ಮನೆಗೆ ಹೋದ ಎಸಿಬಿ ಅಧಿಕಾರಿಗಳು ಬೆಲ್ ಮಾಡಿದ್ರು ಬಾಗಿಲು ತೆಗೆಯಲು ತಡಮಾಡಿದ್ದಾರೆ. ನಂತರ ಹಲವು ಬಾರಿ ಬೆಲ್ ಮಾಡಿದ ನಂತರ ನಿದ್ದೆಗಣ್ಣಿನಿಂದಲೇ ಬಂದ ಸುಧಾ ಡೋರ್ ಓಪನ್ ಮಾಡಿದ್ದಾರೆ. ನಂತರ ಕೋರ್ಟ್ ಸರ್ಚ್ ವಾರೆಂಟ್ ತೋರಿಸಿ ಎಸಿಬಿ ಅಧಿಕಾರಿಗಳು ಸುಧಾ ಅವರ ಮನೆಯೊಳಗೆ ಎಂಟ್ರಿ ಕೊಟ್ಟು ತೀವ್ರ ಶೋಧ ನಡೆಸಿದ್ದಾರೆ.
ಸುಧಾರದ್ದು ಮನೆಯಲ್ಲ, `ಸುಧಾ ಗೋಲ್ಡ್ ಖಜಾನೆ’
ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದೆ.
ಕೊಡಿಗೇಹಳ್ಳಿಯಲ್ಲಿರುರುವ ಸುಧಾ ಅವರ ವಿಲ್ಲಾ ಯಾವ ಅರಮನೆಗೂ ಕಮ್ಮಿ ಇಲ್ಲ. ಈ ಅರಮನೆಯಲ್ಲಿ ಬಗೆದಷ್ಟೂ ಚಿನ್ನಾಭರಣಗಳು ಸಿಕ್ಕುತ್ತಿವೆ. ಬೆಳಿಗ್ಗೆ 6.30ಕ್ಕೆ ಆರಂಭವಾದ ಎಸಿಬಿ ಅಧಿಕಾರಿಗಳ ಶೋಧ ಮಧ್ಯಾಹ್ನ 2 ಗಂಟೆ ಆದರೂ ಮುಂದುವರೆದಿದೆ. ಹೀಗಾಗಿ ಸುಧಾ ಅವರದ್ದು ಮನೆಯೋ, ಗೋಲ್ಡ್ ಖಜಾನೆಯೋ ಎಂಬ ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ.
ಸುಧಾ ಮನೆಯಲ್ಲಿ ಸಿಕ್ಕ ಮಹತ್ವದ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಯ ಪಾಸ್ ಬುಕ್‍ಗಳನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಸುಧಾ ಅವರ ಆಸ್ತಿ ಮತ್ತು ಹಣದ ಎಲ್ಲಾ ವ್ಯವಹಾರದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ಕೊಡಿಗೇಹಳ್ಳಿಯ ಸುಧಾರ ನಿವಾಸಕ್ಕೆ ಅಕ್ಕಸಾಲಿಗನನ್ನು ಸಿಸಿಬಿ ಅಧಿಕಾರಿಗಳು ಕರೆಸಿಕೊಂಡು ತೂಕ ಹಾಕಿಸುತ್ತಿದ್ದಾರೆ. ಮನೆಯಲ್ಲಿ ಸಿಕ್ಕ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದ್ದು, ಎಷ್ಟು ಪ್ರಮಾಣದಲ್ಲಿದೆ ಎಂದನ್ನು ಅಕ್ಕಸಾಲಿಗನ ಮೂಲಕ ಅಂದಾಜು ಮಾಡಿಸಲಿದ್ದಾರೆ
ಕೆಎಎಸ್ ಅಧಿಕಾರಿ ಸುಧಾ ಪತಿ ಚಿತ್ರ ನಿರ್ಮಾಪಕ..!
ಬಿಡಿಎ ಅಧಿಕಾರಿಯಾಗಿದ್ದ ಡಾ. ಸುಧಾ ಪತಿ ಸ್ಟ್ರೋನಿ ಫಾಯಿಸ್ ಸ್ಯಾಂಡಲ್‍ವುಡ್‍ನ ನಿರ್ಮಾಪಕ. ಸುಧಾ ಕ್ರಿಯೇಷನ್ ಬ್ಯಾನರ್ ಅಡಿ ಸ್ಟ್ರೋನಿ ಫಾಯಿಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ರಾಮನ ಸವಾರಿ ಎಂಬ ಕನ್ನಡ ಚಿತ್ರವನ್ನು ಸ್ಟ್ರೋನಿ ಫಾಯಿಸ್ ನಿರ್ಮಾಣ ಮಾಡಿದ್ದಾರೆ.
ಡಾ.ಸುಧಾ ಮೇಲಿರುವ ಪ್ರಮುಖ ಆರೋಪಗಳು..
2005ರ ಬ್ಯಾಚ್‍ನ ಕೆಎಎಸ್ ಅಧಿಕಾರಿಯಾಗಿರುವ ಡಾ. ಸುಧಾ, ಬಿಡಿಎದಲ್ಲಿ ವಿಶೇಷ ಭೂಸ್ವಾದೀನ ಅಧಿಕಾರಿಯಾಗಿದ್ದರು. ಈ ವೇಳೆ ಕೆಂಪೇಗೌಡ ಲೇಔಟ್ ಹಾಗೂ ವಿಶ್ವೇಶ್ವರಯ್ಯ ಲೇಔಟ್ ನಿರ್ಮಾಣದ ಕಾರ್ಯಕ್ಕೆ ಬಿಡಿಎ ಮುಂದಾಗಿತ್ತು.
ಈ ವೇಳೆ ಜಮೀನಿನ ಮೂಲ ಮಾಲೀಕರು ಹಾಗೂ ಬಿಡಿಎ ನಡುವಿನ ದಲ್ಲಾಳಿಗಳ ಜೊತೆ ಕಿಕ್ ಬ್ಯಾಕ್ ಪಡೆದ ಆರೋಪ ಸುಧಾ ಅವರ ಮೇಲಿದೆ. ದಲ್ಲಾಳಿಗಳಿಂದ ಕೋಟಿ ಕೋಟಿ ಹಣ ಲಂಚ ಪಡೆದು, ಬಂದ ಹಣದಲ್ಲಿ ಪತಿಯ ರಿಯಲ್ ಎಸ್ಟೇಟ್‍ಗೆ ಹೂಡಿಕೆ ಮಾಡಿರೋ ಆರೋಪವಿದೆ.
ಈ ಆರೋಪ ಕೇಳಿಬಂದ ಹಿನ್ನಲೆ ಬಿಡಿಎಯಿಂದ ಸುಧಾ ಅವರನ್ನ ರಿಲೀವ್ ಮಾಡಲಾಗಿತ್ತು. ನಂತರ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಡಾ. ಸುಧಾ ಅಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.