ಲಕ್ನೋ: ಕಾರು ಹಾಗೂ ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ನಲ್ಲಿ (Bijnor) ಈ ಘಟನೆ ನಡೆದಿದೆ. ಮದುವೆ ಮುಗಿಸಿ ವರನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಜೋಡಿ ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ.
ದಟ್ಟ ಮಂಜು ಕವಿದಿದ್ದ ಕಾರಣ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನವಜೋಡಿ ಬಿಜ್ನೋರ್ನ ಧಂಪುರದಲ್ಲಿರುವ ವರನ ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿ ನವದಂಪತಿ ಸೇರಿದಂತೆ ಹಲವರು ಇದ್ದರು.
ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಟ್ಟ ಮಂಜಿನಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾಥಿಸಿದ್ದಾರೆ.








