ಚಿಕ್ಕಮಗಳೂರು: ಗುಂಡೇಟು ತಿಂದಿದ್ದರೂ ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಎನ್.ಆರ್. ಪುರದ (NRPura) ಬಾಳೆಹೊನ್ನೂರು ಹತ್ತಿರದ ಮಾಗಲು ಗ್ರಾಮದ ಪೂರ್ಣೇಶ್ ಬಂಧಿತ ಆರೋಪಿ ಎನ್ನಲಾಗಿದೆ. ಶನಿವಾರ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ. ಇಂದು ಮಾಗಲು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇದ್ದ ವೇಳೆ ಬಾಳೆಹೊನ್ನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿಯ ಮೇಲೆ 2012 ರಿಂದ 8 ಪ್ರಕರಣಗಳು ದಾಖಲಾಗಿದ್ದವು. 4 ಹಲ್ಲೆ ಹಾಗೂ ಕೊಲೆ ಯತ್ನ, 3 ಹಲ್ಲೆ ಪ್ರಕರಣ ಮತ್ತೊಂದು ಪೊಲೀಸರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದವು. ಈತನ ಮೇಲೆ ಕೋರ್ಟ್ ನಿಂದ ಸಮನ್ಸ್ ಕೂಡ ಜಾರಿಯಾಗಿತ್ತು. ಆದರೆ, ಆರೋಪಿ ಕೈಗೆ ಸಿಗುತ್ತಿರಲಿಲ್ಲ. ಮನೆಯಲ್ಲೂ ವಾಸವಾಗಿರದೆ. ರಾತ್ರಿ ವೇಳೆ ಕಾಡು, ಕಾಫಿ ತೋಟದ ಕಾಡಿನ ದೊಡ್ಡ-ದೊಡ್ಡ ಮರಗಳ ಮೇಲೆ ಮಲಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. 2023ರ ಅಕ್ಟೋಬರ್ 30ರಂದು ಆತ ಮಾಗಲು ಗ್ರಾಮದ ತನ್ನ ಮನೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಮಚ್ಚು ಬೀಸಿದ್ದ.
ಹೀಗಾಗಿ ಆತನ ಮೇಲೆ ಫೈರಿಂಗ್ ಮಾಡಲಾಗಿತ್ತು, ಪೊಲೀಸ್ ಪೇದೆ ಮಂಜುನಾಥ್ ಎಂಬವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿಂದಲೂ ತಪ್ಪಿಸಿಕೊಂಡಿದ್ದ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.