ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರ ವ್ಯಾಪಾರವನ್ನು ನಿರ್ಬಂಧಿಸುತ್ತಿರುವವರ ವಿರುದ್ಧ ಕ್ರಮ ಅಸಾಧ್ಯ: ಮಾದುಸ್ವಾಮಿ
ಬೆಂಗಳೂರು: ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರ ವ್ಯಾಪಾರವನ್ನು ನಿರ್ಬಂಧಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಬುಗಿಲೆದ್ದಿರುವ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ಅವಕಾಶ ನೀಡದಿರುವ ಕುರಿತು ಇಂದು ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು ರೂಲ್ ಆಫ್ ಲಾ ಮೇಲೆ ಸರ್ಕಾರ ನಡೆಯಲಿದೆ. 2002ರಲ್ಲಿಯೇ ಈ ಬಗ್ಗೆ ರೂಲ್ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿಯವರು ಈ ರೂಲ್ ಅನ್ನು ಉಲ್ಲೇಖಿಸಿ ಹಿಂದೂಯೇತರರಿಗೆ ಮಳಿಗೆ ತೆರೆಯುವ ಗುತ್ತಿಗೆ ತಡೆದಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ನೀವೇ ಮಾಡಿರುವ ಕಾಯ್ದೆಯಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಅದನ್ನು ನೀವು ಹೇಗೆ ತಡೆಯುತ್ತೀರಿ? ಎಂದು ಅಲ್ಲಿನ ಆಡಳಿತ ಮಂಡಳಿಯವರು ಪ್ರಶ್ನೆ ಮಾಡುತ್ತಿದ್ದಾರೆ.
ಆ ಜಾಗ ಬಿಟ್ಟು ಬೇರೆ ಕಡೆ ನಿರ್ಬಂಧ ಮಾಡಿದರೆ ಮಾತ್ರ ಕ್ರಮ ವಹಿಸಲಾಗುತ್ತದೆ. ಸದ್ಯ ನಾವು ದೇವಾಲಯ ವ್ಯಾಪ್ತಿಯಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನಿರಾಕರಿಸುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆ ಆವರಣ ಬಿಟ್ಟು ಹೊರಗೆ ಈ ರೀತಿ ಮಾಡಿದರೆ ಆಗ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.