ಒತ್ತುವರಿ ಜಮೀನನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಲು ಕ್ರಮ : ಆರ್.ಅಶೋಕ್ R. Ashok saaksha tv
ಬೆಂಗಳೂರು : ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಬಹಳಷ್ಟು ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿದ್ದು, ಒತ್ತುವರಿಯಾಗಿರುವ ಜಮೀನನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಮೂರನೇ ದಿನವಾದ ಇಂದು ಜಮೀನು ಒತ್ತುವರಿ ಅಂತಹ ಹಲವಾರು ಸಾರ್ವಜನಿಕ ಮುಖ್ಯ ವಿಚಾರಗಳ ಕುರಿತು ಚರ್ಚೆ ನಡೆಯಿತು. ಪ್ರಾರಂಭದಲ್ಲಿ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಭಾಪತಿ ಬಸವರಾಜ್ ಹೊರಟ್ಟಿ ಇದಕ್ಕೆ ಒಪ್ಪದೇ ಪ್ರಶ್ನೋತ್ತರದ ಬಳಿಕ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಬಹಳಷ್ಟು ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿದ್ದು, ಒತ್ತುವರಿಯಾಗಿರುವ ಜಮೀನನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೇ ಪ್ರತಿ ಶನಿವಾರ ಕೇವಲ ಬೆಂಗಳೂರಿನ ಒತ್ತುವರಿಯಾದ ಸರ್ಕಾರಿ ಜಮೀನು ತೆರವು ಕೆಲಸಕ್ಕೆ ಮೀಸಲಿಡಬೇಕು ಎಂದು ಸೂಚನೆ ನೀಡಲಾಗುವುದು. ಇರುವ ಸಾವಿರಾರು ಎಕರೆ ಒತ್ತುವರಿ ಜಮೀನಿನಲ್ಲಿ 830 ಎಕರೆ ಮಾತ್ರ ತೆರವುಗೊಳಿಸಬಹುದಾಗಿದ್ದು, ಉಳಿದ ಜಮೀನಿನ ತೆರವು ಕಾರ್ಯ ಪ್ರಗತಿಯಲ್ಲಿದ್ದು ಈ ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದು ತಿಳಿಸಿದರು.