ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸಲು ಕ್ರಮ : ಜಗದೀಶ್ ಶೆಟ್ಟರ್
ಬೆಂಗಳೂರು : ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಹಾಗೂ ನೈಟ್ರೋಜನ್ ಪಿಎಸ್ಎ ಉತ್ಪಾದನಾ ಘಟಕಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಾರ ಮತ್ತು ಯಾದಗಿರಿ ಜಿಲ್ಲೆಯಲ್ಲಿ 1000 ಎಲ್ಪಿಎಂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ಸಾರ್ವಜನಿಕ ಉದ್ದಿಮೆಗಳ ಸಹಕಾರದಿಂದ ಒಟ್ಟಾರೆಯಾಗಿ 104 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಿದ್ದೇವೆ. ರಾಯಚೂರಿನಲ್ಲಿ ನೈಟ್ರೂಜನ್ ಪಿಎಸ್ಎ ಉತ್ಪಾದನಾ ಘಟಕವನ್ನು ಪರಿವರ್ತಿಸಿ ಜಿಲ್ಲಾ ಆಸ್ಪತ್ರೆಗೆ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು ಹೇಳಿದರು.
ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ:
ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕಾರ್ಯವನ್ನು ನಡೆಸಲಾಗುತ್ತಿದೆ. ರಾಯಚೂರಿನ ಕೆಪಿಸಿಎಲ್ ಬಾಟ್ಲಿಂಗ್ ಆಕ್ಸಿಜನ್ ಪ್ಲಾಂಟ್ ಹಾಗೂ ವಿಐಎಸ್ಎಲ್ ಗೆ ಅಗತ್ಯವಿರುವ ಕಂಪ್ರೆಸ್ಸರ್ ನ್ನು ಖರೀದಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಆಕ್ಸಿಜನ್ ಜನರೇಟರ್ ಯೂನಿಟ್ಗಳು:
ಕೇಂದ್ರ ಸರಕಾರದ ವತಿಯಿಂದ ರಾಜ್ಯಕ್ಕೆ 28, ಕರ್ನಾಟಕ ಸರಕಾರ 40, ಎನ್ಹೆಚ್ಎಐ – ಡಿಆರ್ಡಿಓ ಸಹಕಾರದಲ್ಲಿ 26 ಆಕ್ಸಿಜನ್ ಜನರೇಟರ್ ಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು:
ರಾಜ್ಯಕ್ಕೆ 60 ಸಾವಿರ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಈಗಾಗಲೇ 3 ಸಾವಿರ ಕಾನ್ಸನ್ಟ್ರೇಟರ್ಗಳ ಖರೀದಿಗೆ ಟೆಂಡರ್ ನೀಡಿದೆ. ಕೇಂದ್ರ ಸರಕಾರ 800 ಕಾನ್ಸನ್ಟ್ರೇಟರ್ಗಳನ್ನು ನೀಡಿದ್ದು ಹಂತ ಹಂತವಾಗಿ ನೀಡುವ ನಿರೀಕ್ಷೆ ಇದೆ.
ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಜಾವೇದ್ ಆಖ್ತರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.