ಬೆಂಗಳೂರು : ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗಿರುವ ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಎಲ್ಲಾ ಗಾಸಿಪ್ ಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿದೆ.
ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿಕಿತ್ಸೆಯ ಬಳಿಕ ಮನೆಗೆ ತೆರಳಿರುವ ಧ್ರುವರಿಗೆ ಮಾವ ಅರ್ಜುನ್ ಸರ್ಜಾ ಕುಟುಂಬದ ಜೊತೆಗಿದ್ದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿರುವ ಸುದ್ದಿ ನಿಜವೂ ಆಗಿದೆ. ಆದರೆ ಧ್ರುವ ಸರ್ಜಾ ಅಭಿಮಾನಿಗಳು ಆತಂಕ ಪಡುವಂತಹುದ್ದು ಏನೂ ಆಗಿಲ್ಲವೆಂದು ಸ್ವತಃ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಧ್ರುವ ಸರ್ಜಾ, ಆಘಾತದಿಂದ ಹೊರಬರಲು ಆಗಿತ್ತಿಲ್ಲ. ಕಾಲಕ್ರಮೇಣ ಸರಿ ಹೋಗುತ್ತದೆ. ಯಾರಿಗೂ ಭಯ ಬೇಡ. ನನ್ನನ್ನು ನಾನು ಸಂಭಾಳಿಸಿಕೊಳ್ತೀನಿ, ಚೇತರಿಸಿಕೊಂಡು ಎಲ್ಲರ ಮುಂದೆ ಶೀಘ್ರವೇ ಬರ್ತೀನಿ ಎಂದು ಹೇಳಿದ್ದಾರೆ.








