ರಾಜಕಾರಣಿಯೊಬ್ಬಾತ ನಟಿ, ಮಾಡೆಲ್ ಹಾಗೂ ವೈದ್ಯೆಯಾಗಿರುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಕುಟುಂಬಸ್ಥರನ್ನು ಅಪಹರಿಸಿ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಐಪಿಎಸ್ ಅಧಿಕಾರಿಗಳು ಕೂಡ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಂಧ್ರ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ವೈಸಿಪಿ ಪಕ್ಷದ ಪ್ರಮುಖ ಮುಖಂಡನಿಂದಲೇ ಈ ಕೃತ್ಯ ನಡೆದಿರುವ ಆರೋಪವಿದೆ. ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾ ಸಾಗರ್ ಎಂಬ ವೈಸಿಪಿ ಮುಖಂಡ ಗುಜರಾತ್ ಮೂಲದ ಕಾದಂಬರಿ ಜೇಟ್ವಾನಿ ಹಾಗೂ ಅವರ ಕುಟುಂಬಕ್ಕೆ ಈ ರೀತಿ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು ಒಂದೂವರೆ ತಿಂಗಳ ಕಾಲ ನಟಿ ಹಾಗೂ ಆಕೆಯ ಕುಟುಂಬ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ. ಈಗ ಆಂಧ್ರದಲ್ಲಿ ಸರ್ಕಾರ ಬದಲಾದ ನಂತರ ನಟಿ, ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ಕುಕ್ಕಲ ವಿದ್ಯಾ ಸಾಗರ್ ನ ಕೆಲ ಚಿತ್ರಗಳನ್ನು ತೋರಿಸಿದ್ದಾರೆ.
ಕಾದಂಬರಿ ಜೇಟ್ವಾನಿ ವಿರುದ್ಧ ಕುಕ್ಕಲ ವಿದ್ಯಾಸಾಗರ್, ಫೆಬ್ರವರಿ 2 ರಂದು ಇಬ್ರಾಹಿಂ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಕಾದಂಬರಿ, ತನ್ನನ್ನು ಟ್ರ್ಯಾಪ್ ಮಾಡಿ, ಈಗ ನನ್ನಿಂದ ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದ. ಹೀಗಾಗಿ ಪೊಲೀಸರು ಕಾದಂಬರಿ ಹಾಗೂ ಅವರ ತಂದೆ, ತಾಯಿಯನ್ನು ಬಂಧಿಸಿದ್ದರು. ಸುಮಾರು ಒಂದೂವರೆ ತಿಂಗಳ ಕಾದಂಬರಿ ಹಾಗೂ ಅವರ ಕುಟುಂಬದವರೆಲ್ಲರೂ ಜೈಲಿನಲ್ಲಿ ಕಾಲ ಕಳೆದರು. ಜಾಮೀನಿನ ಮೇಲೆ ಹೊರಗೆ ಬಂದ ನಂತರ ಎಲ್ಲರನ್ನೂ ಅಪಹರಣ ಮಾಡಿ ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ ಒಂದರಲ್ಲಿ ಕೂಡಿಹಾಕಿ ನಾನಾ ಹಿಂಸೆಗಳನ್ನು ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ಗೆಸ್ಟ್ ಹೌಸ್ನಲ್ಲಿ ಹಲವು ಪೊಲೀಸರು ಒಟ್ಟಾಗಿ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾಗಿ, ಅತ್ಯಾಚಾರ ಯತ್ನ ಮಾಡಿರುವುದಾಗಿಯೂ ನಟಿ ಹೇಳಿಕೊಂಡಿದ್ದಾರೆ. ಕುಕ್ಕಲ ವಿದ್ಯಾಸಾಗರ್ ತನ್ನ ಜಮೀನು, ಮನೆಯ ನಕಲಿ ದಾಖಲೆ ಸೃಷ್ಟಿಸಿಕೊಂಡು ಮೋಸ ಮಾಡಲು ಸಹ ಯತ್ನಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಮೂವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.