ಮುಂಬೈ, ಜೂನ್ 2 : ಅಮೆರಿಕದಲ್ಲಿ ಜನಾಂಗೀಯ ಹಿಂಸೆಗೆ ಒಳಪಟ್ಟು ಮೃತನಾದ ಜಾರ್ಜ್ ಫ್ಲಾಯ್ಡ್ ಗೆ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಾಂಗೀಯ ಘರ್ಷಣೆ ತೀವ್ರ ಹಿಂಸಾತ್ಮಕ ರೂಪ ತಳೆದಿದ್ದು, ಅಮೆರಿಕ ಅಕ್ಷರಶಃ ರಣರಂಗವಾಗಿದೆ.ಜನಾಂಗೀಯ ಘರ್ಷಣೆಗೆ ಕಾರಣ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಬಿಳಿಯ ಜನಾಂಗದ ಪೊಲೀಸ್ ಅಧಿಕಾರಿಯ ಹಿಂಸೆಗೆ ಬಲಿಯಾಗಿರುವುದು.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ ಜಾರ್ಜ್ ಫ್ಲಾಯ್ಡ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ಅವರು ಅಮೆರಿಕದಲ್ಲಿರುವ ಜನಾಂಗೀಯ ದ್ವೇಷ ಅಳಿಯಬೇಕಿದೆ.
ಚರ್ಮದ ಬಣ್ಣದ ಕಾರಣಕ್ಕೆ ಯಾರೊಬ್ಬರೂ ಮತ್ತೊಬ್ಬರನ್ನು ಸಾಯಿಸಬಾರದು ಎಂದು ಬರೆದು ಕೊಂಡಿದ್ದಾರೆ. ಅಷ್ಟೇ ಅಲ್ಲ ನಾನು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಜಾರ್ಜ್ ಫ್ಲಾಯ್ಡ್ ಗೆ ನಿಮ್ಮ ಬೆಂಬಲ ಸೂಚಿಸಲು ಫ್ಲಾಯ್ಡ್ ಎಂದು ಇಂಗ್ಲೀಷ್ ಸಂದೇಶ ಬರೆದು ಈ ಸಂಖ್ಯೆಗೆ ಕಳುಹಿಸಿ ಎಂದು ಸಂಖ್ಯೆಯೊಂದನ್ನು ನೀಡಿದ್ದಾರೆ.
ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಬಿಳಿ ವರ್ಣೀಯ ಪೊಲೀಸ್ ಅಧಿಕಾರಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನನ್ನು ಬಂಧಿಸಿದ್ದು, ಫ್ಲಾಯ್ಡ್ ನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಸಾಯಿಸಿದ್ದ. ಫ್ಲಾಯ್ಡ್ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದಾನೆ ಎಂದು ಆರೋಪಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಆದೀಗ ಹಿಂಸಾತ್ಮಕ ಘರ್ಷಣೆಗೆ ತಿರುಗಿದೆ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಕಾಲಿಟ್ಟಿದ್ದ ಪೊಲೀಸ್ ಅಧಿಕಾರಿಯ ಮೇಲೆ ಕೊಲೆ ಆರೋಪ ಹೊರಿಸಿ ಬಂಧಿಸಲಾಗಿದ್ದು, ಘಟನಾ ಸ್ಥಳದಲ್ಲಿದ್ದ ನಾಲ್ವರು ಪೊಲೀಸರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ.








