ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಎಸ್ ಐಟಿ ಎಡಿಜಿಪಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.
ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಆಪ್ತ ಸುರೇಶ್ ಬಾಬು ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಸ್ ಐಟಿಯಲ್ಲಿರುವ ಎಡಿಜಿಪಿ ಚಂದ್ರಶೇಖರ್ (M.Chandrashekhar) ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪೊಲೀಸರು ಎನ್ ಸಿಆರ್ ದಾಖಲಿಸಿದ್ದಾರೆ.
ಲೋಕಾಯುಕ್ತ ವಿಶೇಷ ತನಿಖಾ ದಳ ಎಡಿಜಿಪಿ ಎಂ.ಚಂದ್ರಶೇಖರ್ ಭ್ರಷ್ಟ ಅಧಿಕಾರಿ. ಆತನ ಮೂಲಕ ರಾಜ್ಯಪಾಲರ ಕಚೇರಿ ಸಿಬ್ಬಂದಿ ತನಿಖೆಗೆ ಕಾಂಗ್ರೆಸ್ ಸರ್ಕಾರ ಅನುಮತಿ ಕೇಳಿಸಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದ್ದರು.
ಕೇಂದ್ರ ಸಚಿವರ ಟೀಕೆಗೆ ಎಂ.ಚಂದ್ರಶೇಖರ್ ತಿರುಗೇಟು ನೀಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಗುಡುಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಡಿಜಿಪಿ ದೂರು ನೀಡಿದ್ದಾರೆ.