ದಿನನಿತ್ಯದ ಕೆಲವು ಅಭ್ಯಾಸಗಳು ನಮಗೆ ಗೊತ್ತಿಲ್ಲದಂತೆಯೇ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ, ಹೃದಯ ಕಾಯಿಲೆಗಳ ಅಪಾಯ ಕೂಡಾ ಕಡಿಮೆಯಾಗುವುದು. ಮಾತ್ರವಲ್ಲ, ಹೃದಯಾಘಾತ ಎನ್ನುವ ಮಹಾ ಮಾರಿಯ ಭಯ ಜೀವನ ಪೂರ್ತಿ ನಮಗೆ ಇರುವುದಿಲ್ಲ.
1. ದಿನಕ್ಕೆ 40 ನಿಮಿಷ ವ್ಯಾಯಾಮ: ಇತ್ತೀಚಿನ ಜೀವನಶೈಲಿಯ ಪ್ರಕಾರ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 40 ನಿಮಿಷ ವ್ಯಾಯಾಮ ಕಡ್ಡಾಯ. ವಾರದಲ್ಲಿ 5 ದಿನ ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು. ಇದು ತೂಕ ನಷ್ಟ, ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
2. ಸದಾ ಸಂತೋಷದಿಂದ ಇರುವುದು: ಸಂತೋಷದಿಂದ ಇದ್ದಾಗ, ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್‌ಗಳ ಬಿಡುಗಡೆಯಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಮಾಡಿದರೆ ಸಹಾಯವಾಗುತ್ತದೆ.
3. ಸರಿಯಾದ ಪ್ರಮಾಣದಲ್ಲಿ ನಿದ್ದೆ: ಉತ್ತಮ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಏನೇ ಆದರೂ ರಾತ್ರಿ ವೇಳೆ 7 ರಿಂದ 8 ಗಂಟೆಗಳ ಕಾಲ ನಿದ್ದೆಯನ್ನು ತಪ್ಪಿಸಬಾರದು. ರಾತ್ರಿ ಸರಿಯಾಗಿ ನಿದ್ದೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರ ಇಡಬಹುದು.
4. ಧೂಮಪಾನ ಮತ್ತು ಮದ್ಯಪಾನದಿಂದ ದೂರ: WHO ಅಂಕಿಅಂಶಗಳ ಪ್ರಕಾರ, ಧೂಮಪಾನ ಮತ್ತು ಮದ್ಯಪಾನದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದು ಹೃದ್ರೋಗದಿಂದ ಸಾವಿನ ಅಪಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತದೆ. ಮದ್ಯಪಾನ ಮತ್ತು ಧೂಮಪಾನದಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು. ಇದು ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
ಈ ನಾಲ್ಕು ಅಭ್ಯಾಸಗಳನ್ನು ಅನುಸರಿಸಿದರೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು.








