ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ – 49 ಜನರಿಗೆ ಶಿಕ್ಷೆ 10 ಜನ ಖುಲಾಸೆ…
2008ರಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 77 ಆರೋಪಿಗಳ ಪೈಕಿ 10 ಮಂದಿಯನ್ನು ಗುಜರಾತ್ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ. ಡಿಸೆಂಬರ್ 2009 ರಿಂದ ಶುರುವಾದ ವಿಚಾರಣೆಯ ತೀರ್ಪು 14 ವರ್ಷಗಳ ಬಳಿಕ ಹೊರಬಂದಿದೆ. 1,100 ಸಾಕ್ಷಿಗಳನ್ನ ವಿಚಾರಿಸಿದ ನಂತರ ಒಟ್ಟು 49 ಆರೋಪಿಗಳಿಗೆ ಶಿಕ್ಷೆಯಾಗಿದೆ.
26 ಜುಲೈ 2008 ರಂದು 70 ನಿಮಿಷಗಳ ಅವಧಿಯಲ್ಲಿ 21 ಬಾಂಬ್ ಗಳು ಗುಜರಾತ್ ನ ಅಹಮದಾಬಾದ್ ನಗರದಲ್ಲಿ ಸ್ಪೋಟಗೊಂಡಿದ್ದವು. ನಗರದಾದ್ಯಂತ ನಡೆದ ಘಟನೆಯಲ್ಲಿ ಕನಿಷ್ಟ 56 ಜನರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸುಮಾರು 80 ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಲಾಗಿತ್ತು.
ಗೋಧ್ರಾ ಘಟನೆಯ ನಂತರ ನಡೆದ ಗಲಭೆಗೆ ಪ್ರತಿಯಾಗಿ ಈ ಸ್ಫೋಟಗಳನ್ನು ನಡೆಸಲಾಯಿತು. ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ನೊಂದಿಗೆ ಸಂಬಂಧ ಹೊಂದಿರುವವರು ನಗರದಲ್ಲಿ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ತನಿಖೆ ನಡೆಸಿದ ಪೊಲೀಸರು ಹೇಳಿದ್ದರು
ಪ್ರಕರಣಕ್ಕೆ ಸಂಬಂಧಿಸಿದಂತೆ 6000 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 3,47,800 ಪುಟಗಳ 547 ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ. ಪ್ರಾಥಮಿಕ ಚಾರ್ಜ್ ಶೀಟ್ ಬರೋಬ್ಬರಿ 9800 ಪುಟಗಳಷ್ಟು ದೊಡ್ಡದಾಗಿತ್ತು. 77 ಆರೋಪಿಗಳ ಪ್ರಕರಣದಲ್ಲಿ 14 ವರ್ಷಗಳ ನಂತರ ವಾದಗಳು ಪೂರ್ಣಗೊಂಡಿವೆ. ನಿರ್ಧಾರ ತೆಗೆದುಕೊಳ್ಳಲು 7 ನ್ಯಾಯಾಧೀಶರನ್ನು ಬದಲಾಯಿಸಲಾಗಿದೆ. ಲಾಕ್ಡೌನ್ ಸಮಯದಲ್ಲೂ ವಿಚಾರಣೆ ಪ್ರತಿದಿನ ನಡೆದಿದೆ.