ಏರ್ ಇಂಡಿಯಾ ನೌಕರರನ್ನ ಕನಿಷ್ಠ ಒಂದು ವರ್ಷದವರೆಗೂ ಕೆಲಸದಿಂದ ತೆಗೆಯುವಂತಿಲ್ಲ – ಟಾಟಾಗೆ ಸರ್ಕಾರದ ಷರತ್ತು..!
ಮುಂಬೈ : ಇತ್ತೀಚೆಗೆ ಟಾಟಾ ಸನ್ಸ್ ಕಂಪನಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನ ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ. ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಗೆದ್ದ ಟಾಟಾ ಸನ್ಸ್ ಗೆ ಕೇಂದ್ರ ಸರ್ಕಾರ ಒಂದು ಷರತ್ತು ವಿಧಿಸಿದೆ. ಟಾಟಾ ಕಂಪನಿ ಕನಿಷ್ಠ ಒಂದು ವರ್ಷದವರೆಗೆ ಈಗಿರುವ ಏರ್ ಇಂಡಿಯಾದ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಏರ್ ಇಂಡಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಿ, ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಒಂದು ವರ್ಷ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ತೆಗೆದು ಹಾಕುವಂತಿಲ್ಲ. ಜೊತೆಗೆ ಒಂದು ವರ್ಷ ನಂತರ ಸಂಸ್ಥೆ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ವಿಆರ್‍ಎಸ್ ಸೌಲಭ್ಯವನ್ನು ನೀಡಬೇಕೆಂದು ತಿಳಿಸಿದ್ದಾರೆ.
ಪ್ರಸ್ತುತ ಅಂದ್ರೆ ಖಾಸಗೀಕರಣಕ್ಕೂ ಮುಂಚಿನಿಂದ ಏರ್ ಇಂಡಿಯಾದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಖಾಯಂ ಮತ್ತು 4 ಸಾವಿರಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 12 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳು ಸಂಸ್ಥೆಯಿಂದ ನಿವೃತ್ತರಾಗಲಿದ್ದಾರೆ. ನೌಕರರ ನಿವೃತ್ತಿಯ ನಿಯಮಗಳ ಪ್ರಕಾರ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಸುಮಾರು 55 ಸಾವಿರ ನಿವೃತ್ತ ಸಿಬ್ಬಂದಿ ಏರ್ ಇಂಡಿಯಾದಿಂದ ಕೆಲ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಟಾಟಾ ಸಮೂಹ ಒಟ್ಟು 18 ಸಾವಿರ ಕೋಟಿ ರೂ.ಪಾಯಿಗೆ ಏರ್ ಇಂಡಿಯಾವನ್ನ ತನ್ನದಾಗಿಸಿಕೊಂಡಿತ್ತು.








