100 ಆಮ್ಲಜನಕ ಸಾಂದ್ರಕವನ್ನ ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ
ಕೊರೊನಾ ಸಂದರ್ಭದಲ್ಲಿ ಬಡವರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದು, ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾಯುತ್ತಿರುವಂತಹ ಕಠಿಣ ಪರಿಸ್ಥಿತಿಯಲ್ಲೂ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ವಿದೇಶಗಳಿಗೆ ಹಾರಿ ಮಾಲ್ಡೀವ್ಸ್ ನಲ್ಲಿ ಮಜಾ ಮಾಡ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಶೇರ್ ಮಾಡುತ್ತಾ ನೆಟ್ಟಿಗರ ಟ್ರೋಲ್ ಗೆ ಗುರಿಯಾಗಿದ್ದಾರೆ.
ಮತ್ತೊಂದೆಡೆ ಕೆಲ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ಸಂಕಷ್ಟದ ಸಮಯದಲ್ಲಿ ಭಾರತದ ಪರ ನಿಂತಿದ್ದಾರೆ. ಸಲ್ಮಾನ್ ಖಾನ್ , ಸೋನು ಸೂದ್ , ಅಕ್ಷಯ್ ಕುಮಾರ್ ಕೂಡ ಈ ಸಾಲಿನಲ್ಲಿದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಗಂಭೀರ್ ಫೌಂಡೇಶನ್ ಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿ ಕೊರೊನಾ ಸೋಂಕಿತರಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಅಕ್ಷಯ್ ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಅಕ್ಷಯ್ ದಂಪತಿ 100 ಆಮ್ಲಜನಕ ಸಾಂದ್ರಕವನ್ನ ದಾನ ಮಾಡಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಮಾಹಿತಿ ನೀಡಿ ‘ಕೋವಿಡ್19 ರೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ 100 ಆಮ್ಲಜನಕದ ಸಾಂದ್ರತೆಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದನ್ನು ಅಗತ್ಯವೆನಿಸುವವರಿಗೆ ನೀಡಲಿದ್ದೇವೆ’ ಎಂದು ತಿಳಿಸಿದ್ದಾರೆ. ಅಲ್ಲದೇ ‘ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಇತರರು ತಮ್ಮ ಕೈಯಿಂದ ಸಾಧ್ಯವಾದಷ್ಟು ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ‘ಡೈವಿಕ್ ಫೌಂಡೇಶನ್ ಮೂಲಕ ಲಂಡನ್ ಎಲೈಟ್ ಹೆಲ್ತ್ನ ಡಾ ದ್ರಾಶ್ನಿಕಾ ಪಟೇಲ್ ಮತ್ತು ಡಾ.ಗೋವಿಂದ್ ಬಂಕಾನಿ ಅವರು 120 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡುತ್ತಿದ್ದಾರೆ. ಇದರ ಜೊತೆಗೆ ಅಕ್ಷಯ್ ಕುಮಾರ್ ಮತ್ತು ನಾನು 100 ಆಮ್ಲಜನಕ ಸಾಂದ್ರಕಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮಲ್ಲಿ ಈಗ ಒಟ್ಟು 220 ಆಮ್ಲಜನಕ ಸಾಂದ್ರಕ ಇದೆ’ ಎಂದು ತಿಳಿಸಿದ್ದಾರೆ.








