ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. 2019ರ ಜೂನ್ ನಿಂದ 2020ರ ಮೇ ಅವಧಿಯಲ್ಲಿ ಕಿಲಾಡಿ ಅಕ್ಷಯ್ ಕುಮಾರ್ 366 ಕೋಟಿ ರೂ ವೇತನ ಪಡೆದಿದ್ದಾರೆ. ಹೀಗಾಗಿ ಫೋರ್ಬ್ಸ್ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿದ್ದಾರೆ. ಅಂದ್ಹಾಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಟ ಅಕ್ಷಯ್.
ವಿಶೇಷವೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಟರಾಗಿದ್ದರೂ, ಅಕ್ಷಯ್ ಕುಮಾರ್ 19 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದ ಅಕ್ಷಯ್ ಈಗ 52ನೇ ಸ್ಥಾನದಲ್ಲಿದ್ದಾರೆ.
ಹಾಲಿವುಡ್ ತಾರೆಯರನ್ನು ಹಿಂದಿಕ್ಕಿದ ಅಕ್ಷಯ್
ಫೋರ್ಬ್ಸ್ ಪಟ್ಟಿಯಲ್ಲಿ 52ನೇ ಸ್ಥಾನ ಪಡೆದುಕೊಂಡಿರುವ ಅಕ್ಷಯ್ ಕುಮಾರ್, ಹಾಲಿವುಡ್ನ ಖ್ಯಾತ ನಟರಾದ ವಿಲ್ ಸ್ಮಿತ್, ಜೆನಿಫರ್ ಲೋಪೆಜ್ ಮತ್ತು ಗಾಯಕಿ ರಿಹಾನ್ನಾ ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು 52 ವರ್ಷದ ನಟ ಅಕ್ಷಯ್ ಕುಮಾರ್, ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ನಾಲ್ಕನೆಯವರಾಗಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ 22 ವರ್ಷದ ಸಾಹಸೋದ್ಯಮಿ ಕೈಲಿ ಜೆನ್ನರ್ ಈ ಅವಧಿಯಲ್ಲಿ 590 ಮಿಲಿಯನ್ ಡಾಲರ್ (4,453 ಕೋಟಿ ರೂ) ಸಂಪಾದಿಸುವ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.