ಬಾರಿಯ ಅಂಬಾರಿ ಹೊರಲಿದ್ಯಾ ಅಭಿಮನ್ಯು..?
ಕೊರೊನಾ ನಡುವೆಯೂ ಸರಳವಾಗಿ ದಸರಾ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಅರಣ್ಯ ಇಲಾಖೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಸುಪ್ರೀಂ ನಿರ್ದೇಶನದಂತೆ 60 ವರ್ಷದ ಅರ್ಜುನನಿಗೆ ಅಂಬಾರಿ ಹೊರಿಸದಿರಲು ನಿರ್ಧಾರಿಸಲಾಗಿದೆ. ಅದ್ರಂತೆ, ಈ ಬಾರಿ ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಅಭಿಮನ್ಯು ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಚ್ಚಿಬಿದ್ದ ಸಕ್ಕರೆನಾಡು ಮಂಡ್ಯ..!
ಮಂಡ್ಯ: ದೇವಸ್ಥಾನದಲ್ಲೇ ಮೂವರನ್ನು ಬರ್ಬರವಾಗಿ ಕೊಲೆ ನಡೆದಿರುವ ಘಟನೆ ಮಂಡ್ಯದ ಗುತ್ತಲಿನಲ್ಲಿ ನಡೆದಿದೆ. ಗುತ್ತಲು ಪ್ರದೇಶದಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಈ ಭೀಕರ ಘಟನೆ ನಡೆದಿದ್ದು ಸಕ್ಕರೆ ನಾಡು ಮಂಡ್ಯದ ಜನತೆ ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿದೆ. ಹುಂಡಿ ಕಳವು ಮಾಡಲು ಬಂದ ದುಷ್ಕರ್ಮಿಗಳು, ಪ್ರತಿರೋಧ ತೋರಿದ ದೇವಸ್ಥಾನದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮಾಡಿದ್ದಾರೆ. ಘಟನೆಯಲ್ಲಿ ಗಣೇಶ್, ಪ್ರಕಾಶ್ ಹಾಗೂ ಆನಂದ್ ಕೊಲೆಯಾಗಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಮುಂದುವರೆದ ರಕ್ಕಸನ ರಣಕೇಕೆ..!
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಸ್ಫೋಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 96,551 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 1,209 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಾದ್ಯಂತ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 45,62,415 ಕ್ಕೆ ಸಾವನ್ನಪ್ಪಿದವರ ಸಂಖ್ಯೆ 76,271 ಕ್ಕೆ ಏರಿಕೆಯಾಗಿದೆ. ಇನ್ನು 35,42,664 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 9,43,480 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.
ಮೋಹನ್ ಭಾಗವತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
RSSನ ಸರಸಂಚಾಲಕ ಮೋಹನ್ ಭಾಗವತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾಗವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹಸಚಿವ ಅಮಿತ್ ಷಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
ಚೀನಾ ಸೇನಾಪಡೆಯ ವಿರುದ್ಧ ಜೈಶಂಕರ್ ಆಕ್ರೋಶ
ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ನಡೆಯುತ್ತಿದ್ದು, ಗಡಿ ವಾಸ್ತವ ರೇಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಚೀನಾದ ಸ್ಪಷ್ಟ ವಿವರಣೆ ನೀಡಿಲ್ಲ. ಚೀನಾ ಸೇನಾಪಡೆಯ ಪ್ರಚೋದನಕಾರಿ ವರ್ತನೆ ಬಗ್ಗೆ ಸಭೆಯಲ್ಲಿ ಜೈಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
‘ರಾಗಿಣಿ IPS’ ‘ ದಿ ಟೆರರಿಸ್ಟ್ ಗೆ’ ಡಿಮ್ಯಾಂಡೋ ಡಿಂಮ್ಯಾಂಡು..!
ತುಪ್ಪದ ಬೆಡಗಿ ರಾಗಿಣಿ ನಟನೆಯ ದಿ ಟೆರರಿಸ್ಟ್’ ಸಿನಿಮಾಕ್ಕೆ ಬಾಲಿವುಡ್ ನಲ್ಲಿ ಸಖತ್ ಬೇಡಿಕೆ ಬಂದಿದೆ. ಬಾಲಿವುಡ್ ನ ಸ್ಟಾರ್ ನಟಿಯರು ಆ ಸಿನಿಮಾದ ರೀಮೇಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಎಕೆಲಾನ್ ಪ್ರೊಡಕ್ಷನ್ನ ನಿರ್ಮಾಪಕ ವಿಶಾಲ್ ರಾಣಾ ಎಂಬುವರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿದ್ದು, ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರಂತೆ. ಇನ್ನೂ ಹಿಂದಿಯಲ್ಲಿ ನಟಿ ವಿದ್ಯಾ ಬಾಲನ್ ಅಥವಾ ಸೋನಮ್ ಕಪೂರ್ ರಾಗಿಣಿ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.
ಟ್ರಿಂಬಾಗೋ ನೈಟ್ ರೈಡರ್ಸ್ ಸಿಪಿಎಲ್ ಚಾಂಪಿಯನ್ಸ್
ಶಾರೂಕ್ ಖಾನ್ ಒಡೆತನದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಜೇಯ ಗೆಲುವಿನೊಂದಿಗೆ 2020ರ ಸಿಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಎಂಟು ವಿಕೆಟ್ ಗಳಿಂದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ನಾಲ್ಕನೇ ಬಾರಿ ಸಿಪಿಎಲ್ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. 2020ರ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡಿರುವ ನೈಟ್ ರೈಡರ್ಸ್ ತಂಡ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.
https://youtu.be/_st-YDZlTCE
ಫೈನಲ್ ಗೆ ಒಸಾಕಾ
ಪ್ರತಿಷ್ಠಿತ 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ನೌಮಿ ಒಸಾಕಾ ಅವರು ಫೈನಲ್ ಪ್ರವೇಶಿಸಿದ್ದಾರೆ. ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ನೌಮಿ ಒಸಾಕಾ ಅವರು ಇದೀಗ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಯುಎಸ್ ಓಪನ್ ಟೂರ್ನಿಯ 11ನೇ ದಿನ ನಡೆದ ಮಹಿಳೆಯರ ಮೊದಲ ಸೆಮಿಫೈನಲ್ ನಲ್ಲಿ ನೌಮಿ ಒಸಾಕಾ ಅವರು 7-6, 3 -6, 6-3ರಿಂದ ಜೆನ್ನಿಫರ್ ಬ್ರ್ಯಾಂಡಿ ಅವರನ್ನು ಪರಾಭವಗೊಳಿಸಿದ್ರು.