ದಾವಣಗೆರೆ: ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದ. ಆದರೆ, ಆತನ ಸಾವಿಗೆ ಕಾರಣವಾಗಿದ್ದ ನಾಯಿ, ಯುವಕನ ಮನೆಗೆ ಹೋಗಿ ಸಾಂತ್ವನ ಹೇಳಿರುವ ವಿಚಿತ್ರ ಹಾಗೂ ವಿಸ್ಮಯ ಘಟನೆಯೊಂದು ನಡೆದಿದೆ.
ಆ ಯುವಕ ಸಾವನ್ನಪ್ಪಿದ ಮೂರು ದಿನಗಳ ನಂತರ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ವಿಸ್ಮಯ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21) ಎಂಬ ಯುವಕನ ಮನೆಯಲ್ಲಿ ನಡೆದಿದೆ.
ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿ ಬಿಟ್ಟು ಬರಲು ಹೋಗಿದ್ದ ತಿಪ್ಪೇಶ್, ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಕುರುಬರವಿಟ್ಲಾಪುರದ ಹತ್ತಿರ ಬೈಕ್ ಗೆ ನಾಯಿ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿದ್ದ ತಿಪ್ಪೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಅಡ್ಡ ಬಂದಿದ್ದ ಶ್ವಾನ ಆತನ ಮನೆಗೆ ಆಗಮಿಸಿದ್ದು, ತಿಪ್ಪೇಶ್ ನ ಕೊಠಡಿ, ಅಡುಗೆ ಮನೆ ಸುತ್ತಾಡಿದೆ. ಅಲ್ಲದೆ ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದನ್ನು ಕಂಡು ನೆರೆದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.