ಮೈಸೂರು: ಯುವತಿಯೊಂದಿಗೆ ಆಂಬುಲೆನ್ಸ್ ಡ್ರೈವರ್ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ ಆಕೆಯ ಬಾವನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಘಟನೆಯೊಂದು ನಡೆದಿದೆ.
ಈ ಘಟನೆ ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ (Mysuru Medical College Hospital) ಟ್ರಾಮಾ ಸೆಂಟರ್ ಹತ್ತಿರ ನಡೆದಿದೆ. ಅಂಬುಲೆನ್ಸ್ ಚಾಲಕ ಸಂದೇಶ್ ಈ ರೀತಿ ವಿಕೃತಿ ಮೆರೆದ ಆರೋಪಿ ಎನ್ನಲಾಗಿದೆ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮಹೇಶ್ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ (Devaraja Police Station) ದೂರು ದಾಖಲಾಗಿದೆ.
ಸಂದೇಶ್ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್‌ಗಳ ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದ. ಆನಂತರ ಆತನನ್ನು ಆಸ್ಪತ್ರೆಗೆ ಹೊರಗೆ ಹಾಕಲಾಗಿತ್ತು. ನಂತರ ಆತ ಟ್ರಾಮಾ ಕೇರ್‌ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ. ಅಲ್ಲಿ ಸಂದೇಶ್ ಹಲ್ಲೆಗೊಳಗಾದ ಮಹೇಶ್ ನಾದಿನಿಯ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಇದನ್ನು ಮಹೇಶ್ ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡಿದ್ದ ಸಂದೇಶ್, ಮಹೇಶ್ ನನ್ನ ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿ ಕರೆದುಕೊಂಡು ಹೋಗಿ ಸ್ನೇಹಿತರೊಂದಿಗೆ ತಲೆಯ ಭಾಗಕ್ಕೆ ಹೊಡೆದು ಹಾಗೂ ಕೈ ಮುರಿದು, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮಹೇಶ್ ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.