ಟ್ರಕ್ ಜೀಪ್ ಮುಖಾಮುಖಿ ಡಿಕ್ಕಿ – ಮದುವೆ ಮುಗಿಸಿ ಹಿಂತಿರುಗುತ್ತಿದ್ದ 6 ಮಂದಿ ಸಾವು
ಟ್ರಕ್‌ಗೆ ಜೀಪ್ ಮುಖಾಮುಖಿ ಡಿಕ್ಕಿ ಹೊಡೆದು ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದ ಆರು ಜನರು ಸಾವನ್ನಪ್ಪಿರುವ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೇಥಿ ಜಿಲ್ಲೆಯ ಗೌರಿಗಂಜ್ ಪ್ರದೇಶದಲ್ಲಿ ನಡೆದಿದೆ.
ಬೊಲೆರೊ ಜೀಪ್ ರಾಯ್ ಬರೇಲಿಯ ನಾಸಿರಾಬಾದ್ ಪ್ರದೇಶದಿಂದ ಅಮೇಥಿಯ ವಿವಿಧ ಗ್ರಾಮಗಳ ಜನರೊಂದಿಗೆ ಹಿಂತಿರುಗುತ್ತಿತ್ತು. ಈ ವೇಳೆ ತಡರಾತ್ರಿ (ಮಧ್ಯಾಹ್ನ 12.15 ರ ಸುಮಾರಿಗೆ) ಬಾಬುಗಂಜ್ ಸಗ್ರಾ ಆಶ್ರಮದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವಕ್ತಾರರು ಲಕ್ನೋದಲ್ಲಿ ತಿಳಿಸಿದ್ದಾರೆ.
ಮೃತರನ್ನು ಕಲ್ಲು (40), ಅವರ 8 ವರ್ಷದ ಮಗ ಸೌರಭ್, ಕೃಷ್ಣ ಕುಮಾರ್ ಸಿಂಗ್ (30), ಶಿವ ಮಿಲನ್, ರವಿ ತಿವಾರಿ ಮತ್ತು ತ್ರಿವೇಣಿ ಪ್ರಸಾದ್ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ದಿನೇಶ್ ಸಿಂಗ್ ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಅವರನ್ನು ಉತ್ತಮ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ನುಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಚಾಲಕ ತಲೆಮರೆಸಿಕೊಂಡಿದ್ದಾನೆ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.








