ಬೆಂಗಳೂರು : ಕೊರೊನಾ ಕಂಟಕವನ್ನು ಸವಾಲಾಗಿ ತೆಗೆದುಕೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಒಂಟಿ ಸಲಗದಂತೆ ಕೊರೊನಾಸುರನ ಆರ್ಭಟವನ್ನು ನಿಯಂತ್ರಿಸಲು ಹಗಲಿರುಳು ಹೋರಾಡುತ್ತಿದ್ದಾರೆ. ಕೊರೊನಾ ವೈರಸ್‌ನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕು ಎಂದು ನಿರಂತರ ಹೋರಾಟದಲ್ಲಿರುವ ಸಿಎಂ ಬಿಎಸ್ ವೈಗೆ ಮತ್ತೊಂದು ತಲೆ ಬಿಸಿ ಶುರುವಾಗಿದೆ. ಜೂನ್ 20 ರೊಳಗೆ ಖಾಲಿಯಾಗಲಿರುವ ವಿಧಾನಪರಿಷತ್ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಎಸ್ ವೈ ಸರ್ಕಾರ ಸಿಲುಕಿದೆ.
ರಾಜ್ಯ ಸರ್ಕಾರ ಜೂನ್ 20 ರೊಳಗೆ 12 ಸ್ಥಾನಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಈ 12 ಸ್ಥಾನಗಳ ಪೈಕಿ 7 ಸ್ಥಾನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಉಳಿದ 5 ಸ್ಥಾನಗಳಿಗೆ ಸರ್ಕಾರದ ವತಿಯಿಂದ ನಾಮನಿರ್ದೇಶನ ಸದಸ್ಯರ ಆಯ್ಕೆ ನಡೆಯಲಿದೆ. ಇದಕ್ಕೆ 5 ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯಪಾಲರ ಶಿಫಾರಸ್ಸಿಗೆ ಸರ್ಕಾರ ಕಳುಹಿಸಬೇಕಿದೆ. ಬಾಕಿ 7 ಸ್ಥಾನಗಳಿಗೆ ಚುನಾವಣೆ ನಡೆಸಬೇಕು.
ಈ 7 ಸ್ಥಾನಗಳ ಪೈಕಿ 4 ಸ್ಥಾನಗಳಲ್ಲಿ ಬಿಜೆಪಿ, 2 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 1 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ರಾಜ್ಯ ಸರ್ಕಾರ ಈ 12 ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆಯನ್ನು ಜೂನ್ 20 ರೊಳಗೆ ನಡೆಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದು, ಇದು ಕೊರೊನಾ ಕಾಟದ ನಡುವೆ ಸಿಎಂ ಬಿಎಸ್ ವೈಗೆ ಮತ್ತಷ್ಟು ತಲೆಬಿಸಿ ತಂದೊಡ್ಡಿದೆ.